ವಿಜಯಪುರ: ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೆ, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ನಾನು ಪದೇ ಪದೆ ಕೇಳುತ್ತೇನೆ. ಕಳೆದ 20 ವರ್ಷಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಇಡುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪುನರುಚ್ಚರಿಸಿದ್ದಾರೆ.
ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜತೆ ಉತ್ತರ ಕರ್ನಾಟಕದ ಹಲವು ಜನಪ್ರತಿನಿಧಿಗಳ ಬೆಂಬಲವಿದೆ. ಆದರೆ, ಅವರು ನೇರವಾಗಿ ಧ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ. ಏಕೆಂದರೆ ಅವರಿಗೆ ಮತ್ತೊಮ್ಮೆ ಶಾಸಕರಾಗಬೇಕು ಎನ್ನುವ ಹಂಬಲವಿದೆ. ಆದರೆ, ತಾವು ಮಾತ್ರ ಇದಕ್ಕೆ ಹೆದರುವುದಿಲ್ಲ. ಇನ್ನೂ 15 ವರ್ಷ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ತಾವು ಮುಂದಿನ ಸಿಎಂ ರೇಸ್ನಲ್ಲಿ ಇದ್ದೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಕತ್ತಿ, ನಾನು ಇನ್ನೂ 15 ವರ್ಷ ಬಿಜೆಪಿಯಲ್ಲಿ ಇರುತ್ತೇನೆ. ನನ್ನ ಹಣೆಬರಹದಲ್ಲಿ ಸಿಎಂ ಆಗುವ ಅದೃಷ್ಟವಿದ್ದರೆ, ಖಂಡಿತ ಸಿಎಂ ಆಗುತ್ತೇನೆ ಎಂದು ಸಿಎಂ ಆಗುವ ಆಸೆಯನ್ನು ಹೊರ ಹಾಕಿದರು.
ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು: ಸಚಿವ ಉಮೇಶ್ ಕತ್ತಿ
ಕಾಂಗ್ರೆಸ್ನಲ್ಲಿ ಸಿಎಂ ಆಗುವ ರೇಸ್ನಲ್ಲಿ ಕಾದಾಟ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ, ಆ ಮೇಲೆ ಸಿಎಂ ಕುರ್ಚಿಗೆ ಬಡಿದಾಡಲಿ. ಅದು ಬಿಟ್ಟು ಕೂಸು ಹುಟ್ಟುವ ಮುನ್ನ ಕುಲಾಯಿ ಹೋಲದಂತೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.