ವಿಜಯಪುರ: ಸಿಎಂ ಇಬ್ರಾಹಿಂ ಜೀವನದಲ್ಲಿ ಸತ್ಯ ಮಾತನಾಡಿಲ್ಲ. ಸತ್ಯ ಏನು ಅನ್ನೋದೇ ಅವ್ರಿಗೆ ಗೊತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
32 ಜನ ಬಿಜೆಪಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಎಂ ಇಬ್ರಾಹಿಂ ಕೇವಲ ಭ್ರಮೆಯಲ್ಲಿದ್ದಾರೆ. ರಾಜೀನಾಮೆ ನೀಡುವ ಒಬ್ಬ ಶಾಸಕನ ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಬಿಜೆಪಿಗೆ ಬರಲು ಅನೇಕ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮ ಪಕ್ಷದವರು ಯಾರೂ ಪಕ್ಷ ಬಿಡೋದಿಲ್ಲ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ಬಂದ ಮೇಲೆ 70 ವರ್ಷ ದೇಶದಲ್ಲಿ ಏನು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತೇ ಇಲ್ಲ. ಇನ್ನು ಸಿದ್ದರಾಮಯ್ಯ ಕರೆದರೆ ಬಿಜೆಪಿ ಸೇರಿದ ಶಾಸಕರು ವಾಪಸ್ಸು ಬರುತ್ತಾರೆ ಎಂಬುವುದು ಮಾರ್ಗರೇಟ್ ಅಳ್ವಾ ಅವರ ಭ್ರಮೆ. ರಾಮಕೃಷ್ಣ ಹೆಗಡೆ ಕಾಲದಲ್ಲಿ ನಾವು ಬಿಜೆಪಿಗೆ ಬಂದಿದ್ದೇವೆ. 18 ಜನ ಶಾಸಕರ ಸಹಾಯದ ಮೇಲೆ ಸರ್ಕಾರ ಮಾಡಿದ್ದೀವಿ. ವಾಜಪೇಯಿ ಸಚಿವ ಸಂಪುಟದಲ್ಲಿ ರಾಮಕೃಷ್ಣ ಹೆಗಡೆ ಸಚಿವರಾಗಿದ್ರು. ನಾವು ರಾಮಕೃಷ್ಣ ಹೆಗಡೆ ಫಾಲೋವರ್ಸ್ ಆಗಿರೋ ಕಾರಣ ಬಿಜೆಪಿಗೆ ಬಂದಿದ್ದೇವೆ.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಲು ಕಾರಜೋಳ ನಿರಾಕರಿಸಿದರು.