ವಿಜಯಪುರ: ಕಡಿಮೆ ಬೆಲೆಗೆ ಫಿನಾಯಿಲ್ ನೀಡುತ್ತೇವೆ ಎಂದು ಮನೆ ಬಳಿ ಬಂದ ಮಹಿಳೆವೋರ್ವಳು ಇಡೀ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿ ಪರಾರಿಯಾಗಿದ್ದಾಳೆ. ಇಂತಹದೊಂದು ಘಟನೆ ಇಲ್ಲಿನ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ. ಇವಳ ಕಳ್ಳತನದ ಸ್ಟೈಲ್ ನೋಡಿ ನಗರದ ಜನರೇ ಬೆಚ್ಚಿಬಿದ್ದಿದ್ದಾರೆ.
ಶಾಂತಿನಗರದ ನಿವಾಸಿ, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಅವರ ಮನೆಗೆ ಬಂದಿದ್ದ ಚಾಲಾಕಿ ಮಹಿಳೆ ಮನೆಯಲ್ಲಿ ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದಾಳೆ.
100 ರೂಪಾಯಿಗೆ 3 ಫಿನಾಯಿಲ್ ನೀಡುತ್ತೇವೆ ಎಂದು ಬಂದಿದ್ದ ಇವಳು, ಮೊದಲಿಗೆ ಹಿರಿಯ ಪುತ್ರ ಕೇಶವ ತೋಳಬಂದಿ ಬಳಿ ವ್ಯಾಪಾರಕ್ಕೆ ಮುಂದಾಗಿದ್ದಾಳೆ. ನಮಗೆ ಬೇಡ ಎಂದರೂ ಬಿಡದ ಮಹಿಳೆ, ಫಿನಾಯಿಲ್ ಪರಿಮಳ ಚೆನ್ನಾಗಿದೆಯಾ ನೋಡಿ ಎಂದು ಮೂಗಿನ ಬಳಿ ಬಾಟಲ್ ಹಿಡಿದಿದ್ದಾಳೆ. ತಕ್ಷಣವೇ ಪುತ್ರ ಕೇಶವ ಅಲ್ಲಿಯೇ ಮೂರ್ಛೆ ಹೋಗಿದ್ದಾರೆ. ಬಳಿಕ ಒಳಬಂದ ಚಾಲಾಕಿ ಅಲ್ಲಿಯೇ ಮಲಗಿದ್ದ ದಂಪತಿಗೂ ಪ್ರಜ್ಞೆ ತಪ್ಪುವ ರಾಸಾಯನಿಕ ಮೂಗಿಗೆ ಹಿಡಿದು ತನ್ನ ಕೆಲಸ ಮುಗಿಸಿದ್ದಾಳೆ.
ಬಳಿಕ ಮನೆಯೊಳಗಿದ್ದ 2.20ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ಚಿನ್ನ, 220ಗ್ರಾಂ ಬೆಳ್ಳಿ ಆಭರಣ, ಎರಡು ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದಾಳೆ. ಹಲವು ಗಂಟೆಯ ಬಳಿಕ ಜ್ಞಾನ ಬಂದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೆ ಮನೆಯಲ್ಲಿ ಸಾಕಿದ್ದ ನಾಯಿಗೂ ವಿಷ ಉಣಿಸಿದ್ದು, ಸಂಜೆ ವೇಳೆಗೆ ನಾಯಿ ಮೃತಪಟ್ಟಿದೆ. ಇದರಿಂದಾಗಿ ಕಳ್ಳತನಕ್ಕೆ ಬಂದಿದ್ದ ಮಹಿಳೆಯ ಜೊತೆ ದೊಡ್ಡ ಗ್ಯಾಂಗ್ ನಗರದಲ್ಲಿ ಬೀಡುಬಿಟ್ಟಿರುವ ಕುರಿತು ಅನುಮಾನ ವ್ಯಕ್ತವಾಗಿದೆ.
ಈ ಕಳ್ಳರ ತಂಡ ವೃತ್ತಿಪರ ತಂಡವಾಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಈ ರೀತಿ ಯಾರಾದರು ಮನೆಗೆ ಬಂದರೆ ಎಚ್ಚರ ವಹಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ವಿವಿಧ ರೀತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.