ವಿಜಯನಗರ: ವಿಜಯನಗರ ಜಿಲ್ಲೆಯಾಗಿದ್ದೇ ತಡ, ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಈ ಕೃತ್ಯದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವುದು ಪತ್ತೆಯಾಗಿದೆ. ನಕಲಿ ದಾಖಲೆ ಸೃಷ್ಟಿ ಮತ್ತು ಭೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದ್ದು, ನಾಲ್ವರ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.
ಸರ್ಕಾರದ ಆಸ್ತಿ ಉಳಿಸಬೇಕಾದ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಸರಕಾರಿ ಭೂಮಿಯನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಯಾಗಲು ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸ್ವತಃ ನಗರಸಭೆಯ ಪೌರಾಯುಕ್ತರೇ ಠಾಣೆಗೆ ದೂರು ನೀಡಿದ್ದರು. ನಗರಸಭೆಯಲ್ಲಿ ಕೇಳಿ ಬಂದಿರುವ ಆರೋಪವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು ಮತ್ತು ಅವರನ್ನು ಬೆಂಬಲಿಸುತ್ತಿದ್ದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ.
ಮೊದಲ ಹಂತದಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ನಗರಸಭೆಯ ಮೂವರು ಸಿಬ್ಬಂದಿಗಳಾದ ಎಸ್. ಸುರೇಶ್ (ಎಸ್.ಡಿ.ಎ), ಜಿ. ನೀಲಕಂಠಸ್ವಾಮಿ (ಪ್ರಭಾರ ಆರ್.ಐ) ಹಾಗೂ ಕೆ. ರಮೇಶ (ಪ್ರಭಾರ ಬಿಲ್ ಕಲೆಕ್ಟರ್) ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಪಿ. ಆದೇಶ ಹೊರಡಿಸಿದ್ದಾರೆ. ಜೊತೆಗೆ ಎಸ್. ಅಜಿತ್ ಸಿಂಗ್ (ಕಂದಾಯ ಅಧಿಕಾರಿ), ದಳವಾಯಿ ಮಂಜುನಾಥ (ಎಫ್.ಡಿ.ಎ) ಹಾಗೂ ನಾಗರಾಜ (ಆರ್.ಐ) ವಿರುದ್ಧ ಕ್ರಮ ಜರುಗಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಓದಿ : ಮೋದಿ ಮೈಸೂರಿಗೆ ಯೋಗ ದಿನಾಚರಣೆ ಜೊತೆ, ರಾಜಕೀಯ ಮಾಡಲಿಕ್ಕೂ ಬರ್ತಿದ್ದಾರೆ: ಸಿದ್ದರಾಮಯ್ಯ