ವಿಜಯಪುರ: ಫಿನಾಯಿಲ್ ಮಾರುವ ನೆಪದಲ್ಲಿ ಬಂದಿದ್ದ ಚಾಲಾಕಿ ಮಹಿಳೆಯೊಬ್ಬಳು ಮನೆಯವರಿಗೆ ಮೂರ್ಛೆ ಹೋಗುವ ದ್ರಾವಣ ಸಿಂಪಡಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಶಾಂತಿನಗರದಲ್ಲಿ ನಡೆದಿದೆ.
ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಶಾಂತಿನಗರದಲ್ಲಿರುವ ತೋಳಬಂದಿಯವರ ಮನೆಗೆ ಫಿನಾಯಿಲ್ ಮಾರಲು ಬಂದಿದ್ದ ಮಹಿಳೆಯೊಬ್ಬಳು ಮನೆ ಬಳಿ ನಿಂತಿದ್ದ ಅವರ ಮಗ ಕೇಶವ ಅವರಿಗೆ ಫಿನಾಯಿಲ್ ಖರೀದಿಸುವಂತೆ ಒತ್ತಾಯಿಸಿ ಕನಿಷ್ಠ ಇದರ ವಾಸನೆ ತೆಗೆದುಕೊಳ್ಳಿ ಎಂದು ವಾಸನೆ ನೋಡುವಂತೆ ನೀಡಿದ್ದಾಳೆ. ಇದರಿಂದ ಆತ ಮೂರ್ಛೆ ಹೋಗಿದ್ದಾನೆ.
ನಂತರ ಮನೆಯಲ್ಲಿ ಮಲಗಿದ್ದ ತೋಳಬಂದಿ ದಂಪತಿಗೆ ಮಂಪರು ಬರಿಸುವ ದ್ರಾವಣ ಸಿಂಪಡಿಸಿ ಮನೆಯ ತಿಜೋರಿಯಲ್ಲಿದ್ದ 40 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ದೋಚಿಕೊಂಡು ಪರಾರಿಯಾಗಿದ್ದಾಳೆ. ಈ ಸಂಬಂಧ ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.