ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ತಾಳಿಕೋಟೆ ತಾಲೂಕಿನ ಡೋಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಡೋಣಿ ನದಿ ನೀರಿನ ಮಟ್ಟ ಏರಿಕೆಯಾದ ಕಾರಣ ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ 60 ರಲ್ಲಿ ಸಂಚಾರ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಹೆದ್ದಾರಿಯಲ್ಲಿ ಡೋಣಿ ನದಿಗೆ ನಿರ್ಮಿಸಿದ್ದ ಸೇತುವೆ ಶಿಥಿಲವಾಗಿದೆ. ಸೇತುವೆಯ ಕೆಳಭಾಗದಲ್ಲಿ ಹಳೆಯ ನೆಲಮಟ್ಟದ ಸೇತುವೆ ಮೇಲೆ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ನದಿಯಲ್ಲಿ ನೀರು ಏರಿಕೆಯಾಗುತ್ತಿರುವ ಕಾರಣ ನೆಲಮಟ್ಟದ ಸೇತುವೆ ಜಲಾವೃತವಾಗುವ ಸಾಧ್ಯತೆ ಇದೆ. ನದಿಯಲ್ಲಿ ಸೇತುವೆ ಜಲಾವೃತವಾದರೆ ರಾಜ್ಯ ಹೆದ್ದಾರಿ ಬಂದ್ ಆಗುವುದು ಖಚಿತ. ನೆಲಮಟ್ಟದ ಸೇತುವೆ ಜಲಾವೃತವಾಗಲು ಕೇವಲ 2 ಅಡಿ ಮಾತ್ರ ಬಾಕಿ ಇದ್ದು, ಸದ್ಯ ನೆಲಮಟ್ಟದ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ.
ಸೇತುವೆ ಮುಳುಗಡೆಯಾದರೆ ತಾಳಿಕೋಟೆ ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಿಗೆ ತೆರಳಲು 50 ಕಿಲೋ ಮೀಟರ್ ಸುತ್ತು ಹಾಕಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ತಾಳಿಕೋಟೆಯ ಬಳಿ ಸಂಚಾರಕ್ಕೆ ವ್ಯತ್ಯಯ ಸಹ ಆಗಲಿದೆ. ತಾಳಿಕೋಟೆ ಹಡಗಿನಾಳ ಹಾಗೂ ಇತರೆ ಗ್ರಾಮಗಳ ಸಂಚಾರಕ್ಕೆ ಸಮಸ್ಯೆಯಾಗಲಿದ್ದು, ಡೋಣಿ ನದಿಗೆ ನಿರ್ಮಾಣ ಮಾಡಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಹಳೆಯ ನೆಲಮಟ್ಟದ ಸೇತುವೆ ಜಲಾವೃತವಾದರೆ, ಸೇತುವೆ ದಾಟಲು ಹೋಗಿ ಈ ಹಿಂದೆ ಅನೇಕ ಅವಘಡಗಳು ಉಂಟಾಗಿದ್ದವು. ಸ್ಥಳೀಯರು ಜಾಗೃತಿ ವಹಿಸಿ ಜಲಾವೃತ ಸೇತುವೆ ಮೇಲೆ ಸಂಚಾರ ಮಾಡಬಾರದೆಂದು ತಾಳಿಕೋಟೆ ತಹಶೀಲ್ದಾರ್ ಅನಿಲ್ ಕುಮಾರ್ ಢವಳಗಿ ಮನವಿ ಮಾಡಿದ್ದಾರೆ.