ವಿಜಯಪುರ: ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯನವರ ಪಾತ್ರವೇ ದೊಡ್ಡದು. ಬಿಜೆಪಿ 105 ಸ್ಥಾನಕ್ಕೇರಲು ನಾವು ಕಾರಣವೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದುಕೊಂಡು ಬಿಜೆಪಿಯ ಒಂದೇ ಒಂದು ದಾಖಲೆ ಬಹಿರಂಗ ಮಾಡಲಿಲ್ಲ. ನಮ್ಮ ಹೋರಾಟದ ಫಲದಿಂದ ನಂತರದ ಚುನಾವಣೆಯಲ್ಲಿ ಬಿಜೆಪಿ 40ಕ್ಕೆ ಕುಸಿಯಿತು. ಸಿದ್ದರಾಮಯ್ಯ ನಡವಳಿಕೆಯಿಂದ ಜನರು ಕಾಂಗ್ರೆಸ್ನಿಂದ ದೂರ ಹೋಗ್ತಿದ್ದಾರೆ ಎಂದರು.
ಸಿಂದಗಿಯಲ್ಲಿ ದೇವೇಗೌಡರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ಗೆ ಮತ ಕೊಟ್ಟರೆ ಬಿಜೆಪಿಗೆ ಮತ ಕೊಟ್ಟಂತೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಅಂದವರು ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಬಳಿ ಸರ್ಕಾರ ರಚನೆ ಮಾಡಿ ಅಂತ ಏಕೆ ಬಂದಿದ್ದರು ಎಂದು ಪ್ರಶ್ನಿಸಿದರು.
1994ರಲ್ಲಿ ಜನತಾದಳ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯನವರಿಗಿಂತ ನನ್ನ ಕೊಡುಗೆ ಒಂದು ಕೈ ಹೆಚ್ಚಿದೆ. ನಾನು ರಾಜಕಾರಣದಿಂದ ದೂರ ಇದ್ದರೂ ಸಹ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿದ್ದೆ ಎಂದರು.
'ದೇವೇಗೌಡರು ಎಂದೂ ಸಹ ಬಿಜೆಪಿ ಜೊತೆ ಕೈ ಜೋಡಿಸಿಲ್ಲ'
ದೇವೇಗೌಡರ ಜಾತ್ಯಾತೀತತೆ ಪ್ರಶ್ನಿಸುವ ನೈತಿಕತೆ ಸಿದ್ದರಾಮಯ್ಯ ಎಲ್ಲಿ ಉಳಿಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು. ನಾನ್ಯಾಕೆ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದೆ? ನಾನು ಬಿಜೆಪಿ ಜೊತೆ ಹೋಗಿ ಸರ್ಕಾರ ಮಾಡುವಂತೆ ಮಾಡಿದ್ದೇ ಸಿದ್ದರಾಮಯ್ಯ. ಆಗ ಸಿದ್ದರಾಮಯ್ಯ ಜೆಡಿಎಸ್ ಮುಗಿಸಲು ಅಹಿಂದ ಮಾಡಿದರು, ಜೆಡಿಎಸ್ ಉಳಿಸಲು ಅನಿವಾರ್ಯವಾಗಿ ಬಿಜೆಪಿ ಜೊತೆ ಕೈಜೋಡಿಸಿದೆ ಎಂದರು.
'ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗೋ ಹುಚ್ಚು'
ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಆಗಲೇಬೇಕು ಅಂತ ಕರ್ನಾಟಕ ಭವನದಲ್ಲಿ ರಗ್ಗು ಹೊದ್ದು ಮಲಗಿದ್ದರು. ಆಗ ಅವರನ್ನು ಕರೆದುಕೊಂಡು ಬಂದವನು ನಾನು. ನಂತರ ಅವರು ಉಪಮುಖ್ಯಮಂತ್ರಿ ಆದರು ಎಂದರು. ಸಿದ್ದರಾಮಯ್ಯನಂತವರು ಟೋಪಿ ಹಾಕಿ ಹೋದರೂ ಚೂರಿ ಹಾಕಿ ಹೋದರೂ ಸಹ ಜೆಡಿಎಸ್ ಉಳಿದಿದ್ದು ನಾನು ಸಿಎಂ ಆಗಿ ಮಾಡಿರೋ ಕೆಲಸಗಳಿಂದ ಮಾತ್ರ.
ಸಿದ್ದರಾಮಯ್ಯ ದುರಹಂಕಾರಕ್ಕೆ 2023ರ ಚುನಾವಣೆಯಲ್ಲಿ ಉತ್ತರ ಸಿಗಲಿದೆ. 2018ರಲ್ಲಿ ಬಾದಾಮಿಯಲ್ಲಿ ನಾನು ಮಾಡಿದ ತಪ್ಪಿನಿಂದಲೇ ಅವರು ಗೆದ್ದರು, ಆದರೆ 2023ಕ್ಕೆ ಅವರ ದುರಹಂಕಾರ ಕೊನೆಯಾಗಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: ಹೆಚ್ಡಿಕೆಯನ್ನು ಸಾಕಿದ್ದು ನಾನೇ.. ಅಲ್ಪಸಂಖ್ಯಾತರನ್ನು ಬಲಿ ಕೊಡುವುದೇ ಕುಮಾರಸ್ವಾಮಿ ಕೆಲಸ: ಜಮೀರ್