ವಿಜಯಪುರ : ನಾಳೆಯಿಂದ ನಾನು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಇಂದು ರಾತ್ರಿ ಪ್ರಚಾರದ ಸಮಯ ನಿಗದಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ. ಸಿಂದಗಿಯಲ್ಲಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ ಬಳಿಕ ಮಾತನಾಡಿದರು.
27ನೇ ತಾರೀಖಿನವರೆಗೆ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡುತ್ತೇನೆ ಎಂದರು. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಹ ಪ್ರಚಾರ ಮಾಡಲಿದ್ದಾರೆ. ನಾನು ಯಾರ ವಿರುದ್ಧವೂ ಅಪಪ್ರಚಾರ ಮಾಡುವುದಿಲ್ಲ ಎಂದರು. ಕಳೆದ ಒಂದು ವಾರದಿಂದ ಹೆಚ್ಡಿಕೆ ಹಾಗೂ ಸಿದ್ದರಾಮಯ್ಯ ಹೇಳಿಕೆಗಳು ಹಾಗೂ ಟ್ವೀಟ್ ವಾರ್ಗೆ ಪ್ರತಿಕ್ರಿಯೆ ನೀಡಲು ಅವರು ಪರೋಕ್ಷವಾಗಿ ನಿರಾಕರಿಸಿದರು.
ನಮ್ಮ ಅಭ್ಯರ್ಥಿಯ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಕೈ ಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷದಿಂದ ಬೇರೆ ಪಕ್ಷಗಳಿಗೆ ಸ್ಥಳೀಯ ಮುಖಂಡರ ವಲಸೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಡಿ, ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಾವು ಮತದಾರರ ಬಳಿಗೆ ತೆರಳುತ್ತೇವೆ. ಅವರೇ ನಿರ್ಧಾರ ಮಾಡುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿಗೆ ತಿರುಗೇಟು ನೀಡಿದ್ರು.
ನಾಳೆಯಿಂದ ಪಕ್ಷದ ಎಲ್ಲ ಮುಖಂಡರು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಎಲ್ಲ ಸಮುದಾಯದ ಮುಖಂಡರನ್ನು ನಮ್ಮ ಪಕ್ಷದ ನಾಯಕರು ಭೇಟಿಯಾಗಲಿದ್ದಾರೆ. ಈ ಸಲದ ಚುನಾವಣೆಯಲ್ಲಿ ಯಾವುದೇ ಲೋಪದೋಷ ಆಗದಂತೆ ನೋಡಿಕೊಳ್ಳುತ್ತೇವೆ. ಪ್ರಚಾರದ ಬಳಿಕ ನಮ್ಮ ಪಕ್ಷದ ಅಭ್ಯರ್ಥಿ ಎಷ್ಟು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂಬುದನ್ನು ಹೇಳುತ್ತೇನೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಸಿದ್ದರಾಮಯ್ಯಗೆ ಅಚ್ಛೇದಿನ್ ಬರಲ್ಲ ಎಂದ ಸಿಎಂ
ನಾಳೆಯಿಂದ ಪ್ರಚಾರದ ಸ್ಪೀಡ್ ಹೇಗೆ ಜಾಸ್ತಿಯಾಗಬೇಕು ಅನ್ನೋದ್ರ ಬಗ್ಗೆ ನಾವು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದರು. ನಾನೇನು ಬೆಂಗಳೂರಿಂದ ದುಡ್ಡು ತಂದು ಇಲ್ಲಿ ಮುಚ್ಚಿ ಚುನಾವಣೆ ಮಾಡ್ತಿಲ್ಲ. ನಮ್ಮ ಕ್ಯಾಂಡಿಡೇಟ್‌ಗೆ ಪ್ರಕಾಶ ಅಂಬೇಡ್ಕರ್ ಸಹಾಯ ಮಾಡುತ್ತಾರೆ.
ಪ್ರಕಾಶ್ ಅಂಬೇಡ್ಕರ್ ನನ್ನ ಗೆಳೆಯರು ಎಂದರು. ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡ್ತೀವಿ ಎಂದಿದ್ದಾರೆ. ಅದಕ್ಕಾಗಿ ಪ್ರಕಾಶ್ ಅಂಬೇಡ್ಕರ್ ಕಡೆಯಿಂದ ನಾಗೇಶ ಮಾನೆ ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂದರು. ಜೆಡಿಎಸ್ ಗೆಲುವಿಗೆ ಪ್ರಕಾಶ್ ಅಂಬೇಡ್ಕರ್ ಪ್ರಚಾರ ಮಾಡ್ತೀವಿ ಎಂದಿದ್ದಾರೆ. ಅವರಿಗೆ ಧನ್ಯವಾದ ಎಂದರು.