ಮುದ್ದೇಬಿಹಾಳ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿ ಪರೀಕ್ಷೆಗಳನ್ನು ಕೋವಿಡ್ 19 ಹಿನ್ನೆಲೆಯಲ್ಲಿ ವಿಳಂಬ ಮಾಡಲಾಗುತ್ತಿದ್ದು, ಪರೀಕ್ಷೆಗಳನ್ನು ಕೂಡಲೇ ಮುನ್ನೆಚ್ಚರಿಕೆ ಕೈಗೊಂಡು ಪರೀಕ್ಷೆ ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಉಪ ತಹಸೀಲ್ದಾರ್ ಮೂಲಕ ಸಿಎಂ ಹಾಗೂ ಡಿಸಿಎಂ ಅಶ್ವಥನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕ ರವೀಂದ್ರ ನಂದೆಪ್ಪನವರ, ಅತಿಥಿ ಉಪನ್ಯಾಸಕರ ಆರ್ಥಿಕ ಜೀವನ ಮಟ್ಟವನ್ನು ಕೋವಿಡ್-19 ಕುಸಿಯುವಂತೆ ಮಾಡಿದೆ. ಪದವಿ ಪರೀಕ್ಷೆಗಳನ್ನು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಡೆಸಬೇಕು. 2020-21ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಜುಲೈ ತಿಂಗಳಲ್ಲಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು. ಇದು ಅತಿಥಿ ಉಪನ್ಯಾಸಕರ ಜೀವನ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಕೇವಲ ಒಂಬತ್ತು ತಿಂಗಳು ವೇತನ ಪಡೆಯುವ ಅತಿಥಿ ಉಪನ್ಯಾಸಕರಿಗೆ 2019-20ರ ಸಾಲಿನ ಏಪ್ರಿಲ್-ಮೇ ತಿಂಗಳ ವೇತನ ಕೂಡಲೇ ಪಾವತಿಸಬೇಕು. ಜುಲೈ ತಿಂಗಳ ಪ್ರಾರಂಭದಲ್ಲಿ ಪರೀಕ್ಷೆ, ಮೌಲ್ಯಮಾಪನ ಚಟುವಟಿಕೆ ಪ್ರಾರಂಭದಿಂದ ಹಿಡಿದು 2020-21ನೇ ಸಾಲಿನ ವೇತನ ಪರಿಗಣಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ 12 ತಿಂಗಳ ವೇತನವನ್ನು ಕೊಡುವ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಈ ವೇಳೆ ಭೀಮನಗೌಡ ಬಿರಾದಾರ, ಗಿರೀಶ ಮಾಗಣಗೇರಿ, ಮುಸ್ತಾಕ ಬಾಗವಾನ, ಶಿವಾನಂದ ಕೊಣ್ಣೂರ, ಎನ್.ಆರ್.ಸಗರ,ಕುಮಾರಸ್ವಾಮಿ ಹಿರೇಮಠ, ವೀರೇಶ ಯರಗುಂಟಿ,ಪ್ರದೀಪ ಜಗ್ಗಲ್ ಇದ್ದರು.