ವಿಜಯಪುರ : ಕೊರೊನಾ ಭೀತಿಯಿಂದ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಆಲಮಟ್ಟಿ ಉದ್ಯಾನವನ ಮತ್ತೆ ಆರಂಭವಾಗುವ ಲಕ್ಷಣ ಗೋಚರಿಸುತ್ತಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಪ್ರಮುಖ ಆಕರ್ಷಣೆಯಾಗಿರುವ ಉದ್ಯಾನವನವು ಮತ್ತೆ ತನ್ನ ಗತವೈಭವಕ್ಕೆ ಮರಳುತ್ತಿದೆ.

ಈ ನಿಟ್ಟಿನಲ್ಲಿ ಇಂದು ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿರುವ ಮೊಘಲ್ ಗಾರ್ಡನ್ ಸಂಗೀತ ಕಾರಂಜಿಗೆ ಸಂಜೆ ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿಯ ಅಧಿಕಾರಿಗಳು (ಕೃಭಾಜನಿನಿ) ಪ್ರಾಯೋಗಿಕ ಪರೀಕ್ಷೆ ನಡೆಸುವ ಮೂಲಕ ಮರು ಚಾಲನೆ ನೀಡಿದರು.

ಚಲನಚಿತ್ರಗಳ ಗೀತೆಗೆ ಕಾರಂಜಿಯ ನೃತ್ಯ ಎಂಥವರನ್ನು ಸೆಳೆಯುವ ಆಯಸ್ಕಾಂತ ಸಂಗೀತ ಕಾರಂಜಿಯಲ್ಲಿದೆ. ಕಳೆದ ನಾಲ್ಕು ತಿಂಗಳಿಂದ ಉದ್ಯಾನವನ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರು ಇತ್ತ ಸುಳಿದಿಲ್ಲ.

ಮಂಡ್ಯದ ಕೆಆರ್ಎಸ್ ಜಲಾಶಯದ ಉದ್ಯಾನವನ ಹಾಗೂ ಸಂಗೀತ ಕಾರಂಜಿ ಆರಂಭಕ್ಕೆ ಅಲ್ಲಿಯ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದು, ಈಗ ಎಂದಿನಂತೆ ನಿರ್ವಹಣೆ ಆರಂಭವಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಆಲಮಟ್ಟಿ ಉದ್ಯಾನವನ ಆರಂಭಕ್ಕೆ ಅನುಮತಿ ನೀಡಿದರೆ ಎಲ್ಲಾ ಉದ್ಯಾನವನಗಳು, ಕಾರಂಜಿ ಪ್ರವಾಸಿಗರಿಗೆ ಮುಕ್ತವಾಗಲಿವೆ.