ವಿಜಯಪುರ: ಸಚಿವ ಗೋವಿಂದ ಕಾರಜೋಳ ವಿರುದ್ಧ ನಾಗಠಾಣ ಶಾಸಕ ದೇವಾನಂದ ಚೌವ್ಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸಚಿವ ಕಾರಜೋಳ ಅವರ ಮಗ ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಅವರ ಮಗನ ಭವಿಷ್ಯಕ್ಕಾಗಿ ನಾಗಠಾಣ ಕ್ಷೇತ್ರದಲ್ಲಿ ಅವರು ಸಂಪೂರ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದರು. ಅಲ್ಲದೇ, ಭೀಮಾ ನದಿ ಪ್ರವಾಹದಿಂದ ಆ ಭಾಗದ ಜನರ ಬದುಕು ಬೀದಿಗೆ ಬಂದಿದೆ. ಅದರ ಕುರಿತು ವಿಚಾರ ಮಾಡುವುದನ್ನು ಬಿಟ್ಟು ಅಧಿಕಾರಿಗಳ ಬದಲಾವಣೆಯ ದಂಧೆಯಲ್ಲಿ ತೊಡಗಿದ್ದಾರೆಂದು ದೂರಿದರು.
ಸಮ್ಮಿಶ್ರ ಸರ್ಕಾರದಲ್ಲಿ ನಾವು ಶಾಸಕರಾಗಿ ಆಯ್ಕೆಯಾದ ಮೇಲೆ ಯಾವ ಅಧಿಕಾರಿಗಳನ್ನು ಬದಲಾವಣೆ ಮಾಡಿಲ್ಲ. ಪಾರರ್ದಶಕವಾಗಿ ಅವರಿಂದಲೇ ಕೆಲಸ ತೆಗೆದುಕೊಂಡಿದ್ದೇವೆ. ಆದರೆ ಇವರು ಬಂದು ಒಂದು ವಾರದಲ್ಲಿಯೇ ಅಧಿಕಾರಿಗಳ ಎತ್ತಂಗಡಿ ದಂಧೆಯಲ್ಲಿ ತೊಡಗಿದ್ದಾರೆ. ಪ್ರವಾಹ ಪೀಡಿತ ಜನರ ಬಗ್ಗೆ ವಿಚಾರ ಮಾಡುವುದನ್ನು ಬಿಟ್ಟು ಅಧಿಕಾರಿಗಳ ಬದಲಾವಣೆ ಮಾಡುತ್ತಿರುವುದು ಸೋಚನೀಯ ಸಂಗತಿ. ಅಷ್ಟೇ ಅಲ್ಲದೇ, ಆಲಮಟ್ಟಿಯಲ್ಲಿ ನಡೆದ ಪ್ರವಾಹದ ಮಾಹಿತಿ ಪಡೆಯುವ ಸಭೆಗೆ, ಕೆಲ ಕಾಂಗ್ರೆಸ್ ಶಾಸಕರಿಗೆ ಅವರು ಆಪ್ತರಿರುವ ಕಾರಣ ಅವರನ್ನು ಕರೆದಿದ್ದಾರೆ. ನನಗೆ ಆ ಸಭೆಯ ಕುರಿತು ಗೋವಿಂದ ಕಾರಜೋಳ ಮಾಹಿತಿಯೇ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದೇ ವೇಳೆ ಕಾಂಗ್ರೆಸ್ ಜತೆಗಿನ ಮೈತ್ರಿ ಕುರಿತು ಮಾತನಾಡಿದ ಶಾಸಕ ಚೌವ್ಹಾಣ್, ಕಾಂಗ್ರೆಸ್ ಜೊತೆ ಮೈತ್ರಿ ಮಾಡುವುದು ಬೇಡ ಎಂದು ನಾವು ಮೋದಲೇ ವಿರೋಧ ಮಾಡಿದ್ವಿ. ಆದರೆ ಅವರು ಆಗ ಕೇಳಲಿಲ್ಲ. ಇವತ್ತು ಕಾಂಗ್ರೆಸ್ ಹೆಣೆದ ಬಲೆಗೆ ನಾವು ಬಲಿಯಾಗಿದ್ದೇವೆ ಎಂದರು. ಅಪ್ಪ ಮಕ್ಕಳು ಇರದೇ ಇರುವ ಪಕ್ಷವಾದರೂ ಯಾವುದು ಇದೆ ಎಂದು ಪ್ರಶ್ನಿಸಿದ ಅವರು, ಎಲ್ಲ ಪಕ್ಷದಲ್ಲಿ ಅಪ್ಪ ಮಕ್ಕಳು ಇದ್ದಾರೆ. ಸಚಿವ ಗೋವಿಂದ ಕಾರಜೋಳ ಅವರ ಮಗ ಕೂಡಾ ಈಗ ರಾಜಕೀಯದಲ್ಲಿ ಇಲ್ಲವಾ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.