ವಿಜಯಪುರ: ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ, ಗಾಣಿಗ ಗುರುಪೀಠದ ಡಾ. ಜಯಬಸವ ಸ್ವಾಮೀಜಿಯವರಿಗೆ ಅದ್ದೂರಿ ಸ್ವಾಗತ ಮಾಡಲಾಯಿತು.
ಗಾಣಿಗ ಸಮಾಜದ ಯುವಕರು ವಿಜಯಪುರ ಬೈಪಾಸ್ ರಸ್ತೆಯಿಂದ ಬೈಕ್ ಮೂಲಕ ಜಾಥಾ ನಡೆಸಿ, ಅದ್ದೂರಿ ಸ್ವಾಗತ ಕೋರಿದರು. ಬಳಿಕ ಶ್ರೀಗಳು ಚಿದಂಬರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಬಳಿಕ ವನಶ್ರೀ ಸಂಸ್ಥಾನ ಮಠಕ್ಕೆ ಬೈಕ್ ಜಾಥಾದಲ್ಲಿ ಆಗಮಿಸಿದ ಸ್ವಾಮೀಜಿಗಳಿಗೆ, ರಾಜ್ಯ ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಅಧ್ಯಕ್ಷ ಎಸ್.ಎಸ್. ಅರಕೇರಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹೂ ಮಾಲೆ ಹಾಕಿ ಸ್ವಾಗತಿಸಿದರು. ಮುತ್ತೈದೆಯರು ಆರತಿ ಬೆಳಗಿದರು.
ಡಾ.ಜಯಬಸವ ಸ್ವಾಮೀಜಿಗಳು, ವನಶ್ರೀ ಸಂಸ್ಥಾನ ಮಠದಲ್ಲಿರುವ ಜಯದೇವ ಜಗದ್ಗುರುಗಳ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.