ವಿಜಯಪುರ: ಕೃಷ್ಣಾ ನದಿ ನೀರು ಮರು ಹಂಚಿಕೆ ಮಾಡಲು ಹೊಸ ನ್ಯಾಯಾಧಿಕರಣ ರಚನೆ ಮಾಡುವಂತೆ ತೆಲಗಾಂಣ ಹಾಗೂ ಆಂಧ್ರ ಸರ್ಕಾರಗಳು ಬೇಡಿಕೆ ಸಲ್ಲಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಕೃಷ್ಣಾ ನೀರಿನ ಮರು ಹಂಚಿಕೆ ಕುರಿತು ಹೊಸ ನ್ಯಾಯಾಧಿಕರಣ ರಚನೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆದಿರುವುದು ಗಮನಕ್ಕೆ ಬಂದಿದೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹೇಳಿಕೆ ಗೊಂದಲಮಯವಾಗಿದೆ. ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಕುರಿತು ನಮಗೆ ಅನ್ಯಾಯ ಆಗಿದೆ ಎಂದು ರಾಜ್ಯಗಳ ವಿಭಜನೆಯ ನಂತರ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳು ಪರಸ್ಪರ ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧಿಕರಣದಲ್ಲಿ ದಾವೆ ಹೂಡಿವೆ. ನ್ಯಾಯಾಧಿಕರಣ ಈಗಾಗಲೇ ನಿರ್ಣಯಿಸಿದಂತೆ ಇದು ಆ ಎರಡೂ ರಾಜ್ಯಗಳ ನಡುವಿನ ಆಂತರಿಕ ವ್ಯಾಜ್ಯವಾಗಿದೆ.
ರಾಜ್ಯ ಪುನರ್ ವಿಂಗಡನೆ ಕಾಯ್ದೆ ಸೆಕ್ಷನ್ 80ರ ಪ್ರಕಾರ (Matter Between two Successive State) ಈಗಾಗಲೇ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಕೂಡ ಅಫಿಡವಿಟ್ ಸಲ್ಲಿಸಿದೆ. ಆದ್ದರಿಂದ ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ನೀರಿನ ಮರು ಹಂಚಿಕೆ ಆ ಎರಡು ರಾಜ್ಯಗಳಿಗೆ ಸೀಮಿತವಾಗಿದೆ ಹೊರತು ಕರ್ನಾಟಕಕ್ಕೆ ಅಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳು ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರವಾಗಿ ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.