ವಿಜಯಪುರ: ಲಾಕ್ಡೌನ್ ಸ್ವಲ್ಪ ಸಡಿಲಿಕೆ ಮಾಡಿದ್ದೇ ತಡ ಜನರು ಮೊದಲಿನಂತೆ ರಸ್ತೆಗಿಳಿದಿದ್ದಾರೆ. ಕೆಲವರು ಅಂಗಡಿಗಳನ್ನು ತೆರೆದು ವ್ಯಾಪಾರ ಕೂಡಾ ಆರಂಭಿಸಿದ್ದಾರೆ. ಮತ್ತೆ ಕೆಲವರಂತೂ ಕೊರೊನಾ ಎಂದರೆ ಏನೆಂಬುದು ತಿಳಿದಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಈ ನಡುವೆ ವಿಜಯಪುರದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಂದ ಕಳೆದ 2 ದಿನಗಳಿಂದ ಸುಮಾರು 1 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹೇಳಿದ್ದಾರೆ. ಮಾಸ್ಕ್ ಧರಿಸದೆ ಸಂಚರಿಸುವವರಿಗೆ ಜಿಲ್ಲಾಡಳಿತ ದಂಡ ವಿಧಿಸುವಂತೆ ಸರ್ಕಾರ ಆದೇಶಿಸಿತ್ತು. ಈ ಆದೇಶದನ್ವಯ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸುಮಾರು 500 ಜನರಿಂದ ದಂಡ ವಸೂಲಿ ಮಾಡಿದೆ. ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿಯವರೇ ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರು ಮಾಸ್ಕ್ ಇಲ್ಲದೆ ಹೊರಗೆ ಬರಲು ಹೆದರುತ್ತಿದ್ದಾರೆ.