ವಿಜಯಪುರ : ಉಪನಿರ್ದೇಶಕರ ಹುದ್ದೆಗೆ ಇಬ್ಬರು ಅಧಿಕಾರಿಗಳು ಕುರ್ಚಿಗಾಗಿ ಜಟಾಪಟಿ ನಡೆಸಿರುವ ಘಟನೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇಂದು ನಡೆದಿದೆ. ಪ್ರಸ್ತಕ ಡಿಡಿಪಿಐ ಆಗಿರುವ ಉಮೇಶ ಶಿರಹಟ್ಟಿಮಠ ಅವರಿಗೆ ಮುಂಬಡ್ತಿ ನೀಡಲಾಗಿದ್ದು, ಜಂಟಿ ನಿರ್ದೇಶಕರಾಗಿ ಬರುವ 30ರಂದು ನಿಯುಕ್ತಿಗೊಳ್ಳಲಿದ್ದಾರೆ. ಆದರೆ ಇನ್ನೂ ಇವರ ಅವಧಿ ಇರುವ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಬಿಇಒ ಆಗಿದ್ದ ಯುವರಾಜ್ ನಾಯಕ್ ಅವರನ್ನು ವಿಜಯಪುರ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿದೆ. ಇಂದು ಡಿಡಿಪಿಐಗೆ ಅಧಿಕಾರ ವಹಿಸಲು ಬಂದಿದ್ದ ಯುವರಾಜ ನಾಯಕ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಡಿಡಿಪಿಐ ಉಮೇಶ ಶಿರಹಟ್ಟಿಮಠ ನಿರಾಕರಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗೆ ಭದ್ರತೆ ಒದಗಿಸಿ ಇಬ್ಬರು ಅಧಿಕಾರಿಗಳ ಮಧ್ಯೆ ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ತಮ್ಮ ಅವಧಿ ಜೂನ್ 30ರವರೆಗೆ ಇದ್ದು ತಾವು ಅಧಿಕಾರ ಹಸ್ತಾಂತರ ಮಾಡುವುದಿಲ್ಲ, 30ರ ನಂತರ ಸರ್ಕಾರದ ಆದೇಶದಂತೆ ನಾನು ಬೆಂಗಳೂರಿನ ಜಂಟಿ ನಿರ್ದೇಶಕರಾಗಿ ನಿಯುಕ್ತಿ ಹೊಂದಲಿದ್ದು, ತದ ನಂತರ ಅಧಿಕಾರ ಹಸ್ತಾಂತರ ಮಾಡುವುದಾಗಿ ಉಮೇಶ ಶಿರಹಟ್ಟಿಮಠ ತಿಳಿಸಿದ್ದಾರೆ. ಬಳಿಕ ಹೊಸದಾಗಿ ನಿಯುಕ್ತಿಗೊಂಡಿರುವ ಯುವರಾಜ ನಾಯಕ್ ಅವರು ಅಂತೆಯೇ ವಾಪಸ್ ತೆರಳಿದ್ದಾರೆ.
ಸುಮಾರು ಗಂಟೆಗಳ ಕಾಲ ಇಬ್ಬರ ನಡುವೆ ವಾದ ವಿವಾದಗಳು ನಡೆದಿದೆ ಎನ್ನಲಾಗಿದೆ. ಸರ್ಕಾರ ತಮ್ಮಗೆ ವಿಜಯಪುರ ಡಿಡಿಪಿಐ ಆಗಿ ಮುಂಬಡ್ತಿ ನೀಡಿ ಆದೇಶಿಸಿದೆ. ಹೀಗಾಗಿ ನೀವು ತಮಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಯುವರಾಜ್ ನಾಯಕ್ ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯ ಇರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ ಇದಕ್ಕೆ ಒಪ್ಪದೇ ನನ್ನ ಅವಧಿ ಇನ್ನೂ ಜೂನ್ 30ರ ವರೆಗೆ ಇದ್ದು ತಾವು ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ತಂದ ಅವಾಂತರ : ಸಾಮಾಜಿಕ ಜಾಲತಾಣದಲ್ಲಿ ನೂತನ ಡಿಡಿಪಿಐ ಯುವರಾಜ್ ನಾಯಕ್ ಅವರಿಗೆ ಸ್ವಾಗತ ಕೋರಿ ಕೆಲ ಬೆಂಬಲಿಗರು ಪೋಸ್ಟ್ ಮಾಡಿದ್ದರು. ಇದು ಹಲವು ಗೊಂದಲಕ್ಕೆ ಕಾರಣವಾಗಿದೆ. ಖಾಲಿ ಇರದ ಹುದ್ದೆಗೆ ಸರ್ಕಾರ ಬೇರೊಬ್ಬ ಅಧಿಕಾರಿಯನ್ನು ನೇಮಕ ಮಾಡಿದ್ದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಸದ್ಯ ಇರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅವರನ್ನು ಬೆಂಗಳೂರಿನ ಜಂಟಿ ನಿರ್ದೇಶಕರಾಗಿ ಆದೇಶ ಹೊರಡಿಸಿದೆ. ಅದರಲ್ಲಿ ಜೂನ್ 30ರಂದು ಅಧಿಕಾರ ಸ್ವೀಕರಿಸುವಂತೆ ಸೂಚಿಸಿದೆ. ಇತ್ತ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ್ ನಾಯಕ್ ಅವರಿಗೆ ವಿಜಯಪುರ ಡಿಡಿಪಿಐ ಆಗಿ ತಕ್ಷಣ ಅಧಿಕಾರ ಸ್ವೀಕರಿಸುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಗೊಂದಲದಿಂದ ಇಂದು ಡಿಡಿಪಿಐ ಕಚೇರಿಯಲ್ಲಿ ಕುರ್ಚಿಗಾಗಿ ಗುದ್ದಾಟ ನಡೆದಿದೆ.
ಅಧಿಕಾರಿಗಳು ಹೇಳುವುದೇನು: ಸದ್ಯ ಡಿಡಿಪಿಐ ಆಗಿರುವ ಉಮೇಶ ಶಿರಹಟ್ಟಿಮಠ ಮಾತನಾಡಿ, ನನ್ನನ್ನು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾಗಿ ಸರ್ಕಾರ ನಿಯುಕ್ತಗೊಳಿಸಿದೆ. ಇಲ್ಲಿ ಇನ್ನೂ ಜೂನ್ 30ರವರೆಗೆ ಕಾಲಾವಕಾಶ ಇದೆ. ಅಷ್ಟರೊಳಗಾಗಿ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ ನಾಯಕ್ ಅವರನ್ನು ಮುಂಬಡ್ತಿ ನೀಡಿ ವಿಜಯಪುರ ಡಿಡಿಪಿಐ ಕಚೇರಿಗೆ ವರ್ಗಾಯಿಸಲಾಗಿದೆ. ಇಂದು ಅವರು ಅಧಿಕಾರ ಸ್ವೀಕರಿಸಲು ಬಂದಿದ್ದರು. ಆದರೆ ಹುದ್ದೆ ಖಾಲಿ ಇಲ್ಲ ಎಂದ ಮೇಲೆ ಅವರಿಗೆ ಅಧಿಕಾರ ಹೇಗೆ ನೀಡಬೇಕು. ಸದ್ಯ ಅವರ ಜತೆ ಮಾತನಾಡಿದ್ದೇನೆ, ಅವರು ಸಮಾಧಾನವಾಗಿ ಹೋಗಿದ್ದಾರೆ. ಮುಂದೆ ಸರ್ಕಾರ ನಿರ್ಧಾರ ಮಾಡಬೇಕಾಗಿದೆ ಎಂದರು.
ವರ್ಗಾವಣೆಗೊಂಡು ಬಂದ ಅಧಿಕಾರಿ ಯುವರಾಜ ನಾಯಕ್ ಮಾತನಾಡಿ, ಇಂದು ತಾವು ಅಧಿಕಾರ ಸ್ವೀಕರಿಸಲು ಸರ್ಕಾರದ ಆದೇಶದಂತೆ ವಿಜಯಪುರ ಡಿಡಿಪಿಐ ಕಚೇರಿಗೆ ಆಗಮಿಸಿದ್ದೆ. ಆದರೆ ಸದ್ಯ ಇರುವ ಡಿಡಿಪಿಐ ಜೂನ್ 30ರವರೆಗೆ ತಮಗೆ ಕಾಲಾವಕಾಶವಿದೆ. ಹೀಗಾಗಿ ಅಧಿಕಾರ ಹಸ್ತಾಂತರ ಮಾಡಲ್ಲ, ಈ ಬಗ್ಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ತಾವು ಸರ್ಕಾರಕ್ಕೆ ಈ ಮಾಹಿತಿಯ ವರದಿ ನೀಡುತ್ತೇನೆ. ಅವರು ನೀಡುವ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆಶಿ ಬಿಬಿಎಂಪಿ ಬಸ್ಸಲ್ಲಿ ಬೆಂಗಳೂರು ರೌಂಡ್ಸ್