ವಿಜಯಪುರ: ಪ್ರವಾಹದಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು.
ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ರೈತರು ಬೆಳೆದ ಬೆಳೆ ನಾಶವಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರವನ್ನು ಘೋಷಣೆ ಮಾಡಿಲ್ಲ. ಸಾಲ ಮಾಡಿ ರೈತ ಬೆಳೆ ಬೆಳೆದಿದ್ದಾನೆ. ಆದರೆ ಪ್ರವಾಹದಿಂದ ಆ ಬೆಳೆ ನಷ್ಟವಾಗಿದೆ. ರೈತರಿಗೆ ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಕಾರಣ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ತಕ್ಷಣ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಸೂತಿ ಸಿದ್ದಲಿಂಗ ದೇವರು, ಉತ್ತರ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶಗೌಡ ಸುಬೇದಾರ, ರಾಹುಲ್ ಕುಬಕಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.