ವಿಜಯಪುರ: ಭಾರಿ ಮಳೆಯಾದ ಕಾರಣ ಬೆಳೆ ಹಾನಿ ಪ್ರಮಾಣವನ್ನು ನೋಡಲು ಹೊಲಕ್ಕೆ ತೆರಳುತ್ತಿದ್ದ ರೈತನೊಬ್ಬ ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ.
ಬೆಳಗ್ಗೆ 7.30ರ ಸುಮಾರಿಗೆ ಮುಳಸಾವಳಗಿ ಗ್ರಾಮದ ಶಿವಪುತ್ರ ಹಣಮಂತ ನಾಟೀಕಾರ ಎಂಬ ರೈತ ತನ್ನ ಹೊಲಕ್ಕೆ ಹೊರಟಿದ್ದ. ಈ ವೇಳೆ ಹಳ್ಳದಲ್ಲಿ ಸಂಚರಿಸುವಾಗ ಪ್ರವಾಹ ಹೆಚ್ಚಾಗಿದ್ದು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಘಟನಾ ಸ್ಥಳಕ್ಕೆ ಸಿಂದಗಿ ತಹಶೀಲ್ದಾರ್ ಸಂಜೀವ ಕುಮಾರ ದಾಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ರೈತನ ಹುಡುಕಾಟ ಮುಂದುವರೆದಿದೆ.