ವಿಜಯಪುರ: ಭೀಕರ ಪ್ರವಾಹ ಬಂದ್ರೂ ನೆರವಿಗೆ ಬಾರದ ಅನರ್ಹ ಶಾಸಕರು ಹಾಗೂ ಬಿಜೆಪಿ ಸರ್ಕಾರಕ್ಕೆ ಸಂತ್ರಸ್ತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಜನತೆ ಹಾಗೂ ಸಂತ್ರಸ್ತರಿಗೆ ಮೋಸ ಮಾಡಿದ್ದಾರೆ. ಕಾಗವಾಡ, ಅಥಣಿ, ಗೋಕಾಕ್‌ದಲ್ಲಿ ಪ್ರವಾಹ ಬಂದಾಗ ಆ ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿದ್ದರು. ಹೀಗಾಗಿ ಅಧಿಕಾರಿಗಳಿಂದ ಕೆಲಸ ಮಾಡಿಸಲು ಆಗಲಿಲ್ಲ. ಇದರ ಶಾಪ ಅವರಿಗೆ ತಟ್ಟಲಿದೆ ಎಂದು ಕಿಡಿಕಾರಿದರು.
ಅನರ್ಹ ಶಾಸಕರ ತೀರ್ಪು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್, ತೀರ್ಪು ಏನೇ ಬರಲಿ, ಗೌರವಿಸಬೇಕು. ಈಗಾಗಲೇ 15ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್‌ನಿಂದ ತಂಡ ರಚಿಸಲಾಗಿದೆ. ಈ ಮೂಲಕ ಎಲ್ಲಾ 15 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಪಕ್ಷದ ನಾಯಕನ ಸ್ಥಾನದ ವಿಚಾರವಾಗಿ, ಶೀಘ್ರ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.