ಮುದ್ದೇಬಿಹಾಳ (ವಿಜಯಪುರ): 6ನೇ ವೇತನ ಜಾರಿಗಾಗಿ ಮುಷ್ಕರ ನಡೆಸುತ್ತಿರುವ ಮುದ್ದೇಬಿಹಾಳ ಘಟಕದ 21 ನೌಕರರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಾರ ಮೇಲೆ ಕೇಸ್: 21 ಜನರ ಪೈಕಿ 2 ಚಾಲಕರು, 19 ಚಾಲಕ ಕಂ ನಿರ್ವಾಹಕರ ಮೇಲೆ ಮುದ್ದೇಬಿಹಾಳ ಘಟಕದ ಸಾರಿಗೆ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಮಹಾಂತೇಶ್ ಪಂಪಣ್ಣವರ್, ಟಿ .ಆರ್ .ಲಂಬಾಣಿ ,ಆರ್.ಜಿ ಮಾದಾಪುರ, ಆಯ್ .ಕೆ.ದೊಡ್ಡಮನಿ ,ಪಿ.ಬಿ.ಕುಲಕರ್ಣಿ, ಜಿ.ಎಚ್. ಬಿರಾದಾರ್, ಎಂ.ಎಸ್.ಹೆಬ್ಬಾಳ, ಬಿ.ಎಸ್. ಕಡಿ,ಬಿ.ಎಸ್ .ಕರಿಭಾವಿ ,ಎಸ್.ಎಂ. ಮಾದಿನಾಳ ಆರ್.ಎಸ್. ರಾಥೋಡ್, ಬಿ.ಆರ್ .ಚಿನಿವಾರ,ಎಸ್.ಎ.ಬಿರಾದಾರ್, ಡಿ.ಪಿ.ತಳವಾರ್, ಎಂ.ಎಂ.ನಾಲಬಂದ, ಎಲ್.ಟಿ. ಕುಂಚಗನೂರ, ಡಿ.ಬಿ.ತಾಂಬೋಳಿ ,ಬಿ.ಎಂ .ನಾಡದಾಳ ಆನಂದ್ ಕುಮಾರ್ ,ಗಣೇಶ್ ದುದಾನಿ ಜೆ.ಡಿ.ಕುಲಕರ್ಣಿ ಮೇಲೆ ದೂರು ದಾಖಲಿಸಲಾಗಿದೆ.
ಬಸ್ ಮೇಲೆ ಕಲ್ಲು ತೂರಾಟ:
ನಾಲತವಾಡ ಮಾರ್ಗದಲ್ಲಿ ಸೇವೆಗೆ ತೆರಳಿದ್ದ ಕೆಎ 28, ಎಫ್-2347 ಬಸ್ಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಹಿರೇಮುರಾಳ ಬಳಿ ಹೋಗುವಾಗ ಕಾರಿನಲ್ಲಿ ಬಸ್ ಬೆನ್ನಟ್ಟಿದ ದುಷ್ಕರ್ಮಿಗಳು, ಬಸ್ ಹೇಗೆ ಸೇವೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಕಲ್ಲೆಸೆದಿದ್ದಾರೆ. ಇದರಿಂದ ಬಸ್ನ ಮುಂಭಾಗದ ಗಾಜು ಒಡೆದಿದ್ದು, ಈ ಕುರಿತು ಮುದ್ದೇಬಿಹಾಳ ಘಟಕ ವ್ಯವಸ್ಥಾಪಕ ರಾವುಸಾಬ್ ಹೊನಸೂರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಒಂದು ವಾರದ ಅವಧಿಯಲ್ಲಿ ನೌಕರರ ಮನೆ - ಮನೆಗೆ ತೆರಳಿ, ಅವರ ಮನವೊಲಿಸಿ ಒಟ್ಟು 11 ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಿದ್ದೆವು. ಆದರೆ, ಏ.12 ರಂದು ನೌಕರರು ಕುಟುಂಬಸ್ಥರೊಂದಿಗೆ ತಟ್ಟೆ, ಲೋಟ ಪ್ರತಿಭಟನೆ ನಡೆಸಿದ್ದಾರೆ. ಇದು ಅಗತ್ಯ ಸೇವೆಗಳ ಅಡಿ ಬರುವ ಸೇವೆಯಾಗಿರುವ ಕಾರಣ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಲ್ಲದೇ ಘಟಕಕ್ಕೆ ನಷ್ಟ ಉಂಟು ಮಾಡಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೋಮವಾರ ಬಸ್ ನಿಲ್ದಾಣದಲ್ಲಿ ನಡೆದ ಘಟನೆಗಳಿಂದ ಮಂಗಳವಾರದಂದು ಯಾವುದೇ ಬಸ್ ಘಟಕದಿಂದ ಹೊರ ಹೋಗಿಲ್ಲ. ಸಂಪೂರ್ಣ ಸಾರಿಗೆ ಸಂಚಾರ ಸ್ತಬ್ಧಗೊಂಡಿದೆ.
ಓದಿ: ಇನ್ನೊಂದು ತಿಂಗಳು ಪ್ರತಿಭಟನೆ ಮಾಡಿದರೂ ಬಗ್ಗಲ್ಲ, ಮುಷ್ಕರನಿರತರಿಗೆ ವೇತನ ನೀಡಲ್ಲ; ಸಿಎಂ