ಮುದ್ದೇಬಿಹಾಳ(ವಿಜಯಪುರ): ಕೋವಿಡ್‌ನಿಂದ ಮರಣ ಹೊಂದಿದವರ ಅಂತ್ಯಸಂಸ್ಕಾರವನ್ನು ಜಾತಿ, ಮತ, ಪಂಥ ಎನ್ನದೆ ಉಚಿತವಾಗಿ ನೆರವೇರಿಸುತ್ತಿರುವ ಪಟ್ಟಣದ ಸಲಾಂ ಭಾರತ ಟ್ರಸ್ಟ್ ಪದಾಧಿಕಾರಿಗಳ ಸೇವೆಗೆ ಉಚಿತ ವಾಹನ ಸೇವೆ ಕಲ್ಪಿಸುವ ಮೂಲಕ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆ ಕೈಜೋಡಿಸಿದೆ.
ಈಟಿವಿ ಭಾರತದಲ್ಲಿ ಮೃತ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ಮಾಡುತ್ತಿದೆ ಸಲಾಂ ಭಾರತ ಟ್ರಸ್ಟ್ ಶೀರ್ಷಿಕೆಯಡಿ ಮೇ.16ರಂದು ವರದಿ ಬಿತ್ತರವಾಗಿತ್ತು. ಇದಕ್ಕೆ ಸ್ಪಂದಿಸಿರುವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಅವರು ಟ್ರಸ್ಟ್ ಪದಾಧಿಕಾರಿಗಳ ಬೇಡಿಕೆಯಂತೆ ಕೋವಿಡ್‌ನಿಂದ ಮರಣ ಹೊಂದಿದವರ ಶವ ಸಾಗಿಸಲು ಟಾಟಾಏಸ್ ವಾಹನವನ್ನು ಉಚಿತವಾಗಿ ಸೇವೆಗೆ ಒದಗಿಸುವ ಮೂಲಕ ನೆರವಿಗೆ ಧಾವಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಅವರು, ಕೋವಿಡ್ ಸೋಂಕಿತರಾಗಿ ಮರಣ ಹೊಂದಿದವರ ಮೃತದೇಹವನ್ನು ಸ್ವತಃ ಅವರ ಮನೆಯವರೇ ಮುಟ್ಟುವುದಕ್ಕೆ ಹಿಂದೇಟು ಹಾಕುತ್ತಿರುವ ಈ ಸಮಯದಲ್ಲಿ, ಮುಸ್ಲಿಂ ಯುವಕರಾಗಿದ್ದರೂ ಎಲ್ಲ ಜಾತಿ ಜನಾಂಗದವರ ಮೃತದೇಹಗಳಿಗೆ ಸಂಸ್ಕಾರ ಕೊಡುವ ಕೆಲಸವನ್ನು ಮಾಡುತ್ತಿರುವುದನ್ನು ಕಂಡಾಗ ಹೃದಯ ಮಿಡಿಯಿತು. ಅವರಿಗೆ ವಾಹನದ ತೊಂದರೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ತಿಳಿದುಕೊಂಡು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತವಾಗಿ ವಾಹನ ಸೇವೆ ನೀಡಿದ್ದೇವೆ ಎಂದರು.
ಇದನ್ನೂ ಓದಿ: ಮೃತ ಕೋವಿಡ್ ಸೋಂಕಿತ ಅಂತ್ಯಸಂಸ್ಕಾರ ಮಾಡುತ್ತಿದೆ ಸಲಾಂ ಭಾರತ ಟ್ರಸ್ಟ್..
ಆರೋಗ್ಯ ಕವಚ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಹೂಗಾರ,ನ್ಯಾಯವಾದಿ ಕೆ.ಬಿ.ದೊಡಮನಿ ಮಾತನಾಡಿ, ತಮ್ಮ ಜೀವ ಒತ್ತೆ ಇಟ್ಟು ಕೋವಿಡ್ ಸೋಂಕಿಗೆ ಒಳಗಾಗದವರ ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸ ಮಾಡುತ್ತಿರುವ ಟ್ರಸ್ಟ್ನ ಯುವಕರ ಕೆಲಸ ಶ್ಲಾಘನೀಯವಾದದ್ದು. ಅವರಿಗೆ ಅಗತ್ಯವಾದ ಪಿಪಿಇ ಕಿಟ್ ಆಸ್ಪತ್ರೆಯಿಂದಲೇ ಒದಗಿಸುವ ಕಾರ್ಯವನ್ನು ವೈದ್ಯರ ಜೊತೆಗೆ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ವಾಜೀದ ಹಡಲಗೇರಿ, ಮಾಧ್ಯಮಗಳ ಸಹಕಾರದಿಂದ ಇಂದು ಉಚಿತವಾಗಿ ವಾಹನ ಸೇವೆ ದೊರಕಿದೆ. ಮುದ್ದೇಬಿಹಾಳ ಕೋವಿಡ್ ಆಸ್ಪತ್ರೆಯಲ್ಲಿ ಮರಣ ಹೊಂದಿದವರು ಮುದ್ದೇಬಿಹಾಳ ಮತ ಕ್ಷೇತ್ರದ ಯಾವುದೇ ಗ್ರಾಮದವರಾಗಿದ್ದರೂ ಅಲ್ಲಿಗೆ ತೆರಳಿ ಅಂತ್ಯಸಂಸ್ಕಾರ ಮಾಡುತ್ತೇವೆ. ನಮ್ಮ ಪದಾಧಿಕಾರಿಗಳಿಗೆ ಅಗತ್ಯ ಪಿಪಿಇ ಕಿಟ್ ಕೊಡುವಂತೆ ವಿನಂತಿಸಿದರು.
ಟ್ರಸ್ಟ್ ಕಾರ್ಯಕ್ಕೆ ಮೆಚ್ಚಿ 10 ಸಾವಿರ ಸಹಾಯಧನ:
ಮುದ್ದೇಬಿಹಾಳ ಪಟ್ಟಣದಲ್ಲಿ ಮಾನವೀಯ ಕೆಲಸ ಮಾಡುತ್ತಿರುವ ಸಲಾಂ ಭಾರತ ಟ್ರಸ್ಟ್ ಪದಾಧಿಕಾರಿಗಳ ಕಾರ್ಯ ಮೆಚ್ಚಿರುವ ನಿವೃತ್ತ ಪ್ರೋ.ಡಾ.ಬಲವಂತ ಉಣ್ಣಿಭಾವಿ ಹತ್ತು ಸಾವಿರ ರೂ.ಗಳ ಚೆಕ್‌ನ್ನು ಟ್ರಸ್ಟ್ನ ಅಧ್ಯಕ್ಷ ಕೆ.ಕೆ.ಮುಲ್ಲಾ ಅವರಿಗೆ ಮಂಗಳವಾರ ಸಹಾಯಾರ್ಥವಾಗಿ ನೀಡಿದ್ದಾರೆ. ಸುರಕ್ಷಿತವಾಗಿ ಕೋವಿಡ್ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆ ನಡೆಸುವಂತೆ ಅವರು ಕಿವಿಮಾತು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಸದಸ್ಯ ರವಿ ಜಗಲಿ, ಹಾಲುಮತ ಸಮಾಜದ ಮುಖಂಡ ಪರಶುರಾಮ ನಾಗರಬೆಟ್ಟ, ಸಲಾಂ ಭಾರತ ಟ್ರಸ್ಟ್ ಅಧ್ಯಕ್ಷ ಕೆ.ಕೆ.ಮುಲ್ಲಾ, ಸಮಿ ನಾಲಬಂದ, ಜಬೀ ನಾಲಬಂಧ, ಜಿಲಾನಿ ಮಕಾನದಾರ, ಮಹೆಬೂಬ ಢವಳಗಿ ಮೊದಲಾದವರು ಇದ್ದರು.