ವಿಜಯಪುರ: ಜಿಲ್ಲೆಯ ಹಿಟ್ನಳ್ಳಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಬೆಳೆಗಳಿಗೆ ಔಷಧ ಸಿಂಪಡಿಸುವ ಹೊಸ ವಿಧಾನವೊಂದನ್ನು ತೋರಿಸಿಕೊಡಲಾಗಿದ್ದು, ಇದನ್ನು ನೋಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಹೌದು, ಹಿಟ್ನಳ್ಳಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ರಾಯಚೂರಿನ ಕೃಷಿ ವಿವಿ ರೈತರಿಗೆ ಔಷಧ ಸಿಂಪಡಣೆಗೆ ಸಹಾಯಕವಾಗುವಂತಹ ಡ್ರೋನ್ ಅನ್ನು ಸಂಶೋಧನೆ ಮಾಡಿದೆ. ಮೇಳದಲ್ಲಿರುವ ರೈತರಿಗೆ ಇದನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಡ್ರೋನ್ ಮೂಲಕ ಔಷಧವನ್ನ ಬೆಳೆಗೆ ಸಿಂಪಡಿಸಿ ತೋರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಬೆಳೆಗೆ ಔಷಧ ಸಿಂಪಡಿಸುವ ಡ್ರೋನ್ ಅಭಿವೃದ್ಧಿ ರಾಯಚೂರಿನ ಕೃಷಿ ವಿವಿಯ ತಾಂತ್ರಿಕ ವಿಭಾಗದಲ್ಲಿ ನಡೆದಿದೆ. ಇನ್ನು ಬ್ಯಾಟರಿ ಚಾಲಿತ ಈ ಡ್ರೋನ್ ಗೆ 20 ಲೀಟರ್ ಔಷಧವನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದ್ದು, ಜೊತೆಗೆ ಜಿಪಿಎಸ್ ಸಹಾಯದಿಂದ ಹೊಲಗಳಿಗೆ ಔಷಧ ಸಿಂಪಡಣೆ ಮಾಡುತ್ತದೆ.
ಇನ್ನು ಡ್ರೋನ್ ಚಾಲನೆ ಮಾಡಲು ಒಂದು ಲ್ಯಾಪ್ಟಾಪ್ ಸಹಾಯ ಬೇಕಾಗುತ್ತದೆ. ಇದರ ಬೆಲೆ ಬರೋಬ್ಬರಿ 15 ರಿಂದ 18 ಲಕ್ಷ ರೂ. ಇದ್ದು, ಸರ್ಕಾರ ಇದನ್ನ ಇನ್ನೂ ಅಭಿವೃದ್ಧಿ ಮಾಡಿ, ಕನಿಷ್ಠ ಶೇ 75 ರಷ್ಟು ಸಬ್ಸಿಡಿ ನೀಡಬೇಕು ಎಂದು ರೈತರು ಆಗ್ರಹಿಸಿದ್ರು. ಈ ಡ್ರೋನ್ ಸಹಾಯದಿಂದ ರೈತರು ಅತಿ ವೇಗವಾಗಿ ಕೆಲಸ ಮಾಡಬಹುದು.