ವಿಜಯಪುರ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹೊಸ ಪ್ರಯೋಗವೊಂದು ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಡ್ರೋನ್ ಟ್ರೈನಿಂಗ್ ನೀಡುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ವಿವಿ ಕೈಹಾಕಿದೆ. ವಿವಿಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರಿಗೆ ಡ್ರೋನ್ ಆಪರೇಟಿಂಗ್ ಟ್ರೈನಿಂಗ್ ನೀಡಲಾಗುತ್ತಿದೆ.
ಡ್ರೋನ್ ಮೂಲಕ ದೃಶ್ಯಗಳನ್ನು ಸೆರೆಹಿಡಿಯೋದು ಹೇಗೆ? ಆಪರೇಟಿಂಗ್ ಹೇಗೆ ಮಾಡಬೇಕು ಅನ್ನೋದರ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ್ ಕಾಕಡೆ ಮುಂದೆ ನಿಂತು ತಮ್ಮ ವಿದ್ಯಾರ್ಥಿನಿಯರಿಗೆ ತರಬೇತಿ ಕೊಡಿಸುತ್ತಿದ್ದಾರೆ. ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದ 21 ವಿದ್ಯಾರ್ಥಿನಿಯರಿಗಾಗಿ ಡ್ರೋನ್ ಟ್ರೈನಿಂಗ್ ನಡೆಯುತ್ತಿದೆ.
ಒಂದು ವಾರ ಕಾಲ ಈ ತರಬೇತಿ ನಡೆಯಲಿದ್ದು, 3 ರಿಂದ 4 ವಿದ್ಯಾರ್ಥಿನಿಯರ ಬ್ಯಾಚ್ ಮಾಡಿ ಡ್ರೋನ್ ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ ಡ್ರೋನ್ ಬಳಸಿ ವಿಶೇಷ ದೃಶ್ಯಾವಳಿಗಳನ್ನು ಹೆಚ್ಚಿನವರು ಸೆರೆ ಹಿಡಿಯುತ್ತಾರೆ. ಆದರೆ ಡ್ರೋನ್ ಮೂಲಕ ಉತ್ತಮ ದೃಶ್ಯಗಳನ್ನು ಸೆರೆ ಹಿಡಿಯುವುದು ಎಂದರೆ ಸುಲಭದ ಮಾತಲ್ಲ. ಅದಕ್ಕಾಗಿಯೇ ಪ್ರಾಪರ್ ಟ್ರೈನಿಂಗ್ನ ಅವಶ್ಯಕತೆ ಇರುತ್ತೆ. ತರಬೇತಿ ಪಡೆದವರು, ಎಕ್ಸಪರ್ಟ್ಗಳು ಮಾತ್ರ ಡ್ರೋನ್ ಆಪರೇಟ್ ಮಾಡೋದಿಲ್ಲ. ಹೀಗಾಗಿ ಡ್ರೋನ್ ಆಪರೇಟಿಂಗ್ ವಿದ್ಯಾರ್ಥಿನಿಯರಿಗೆ ಗೊತ್ತಿರಬೇಕು ಅನ್ನುವ ಕಾರಣಕ್ಕೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ್ ಕಾಕಡೆ ಈ ಕಾರ್ಯದಲ್ಲಿ ತೊಡಗಿದ್ದಾರೆ.
ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಮಾಧ್ಯಮ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿರುವ ಅನುಭವ ಸಿಗಲಿ ಎನ್ನುವ ಕಾರಣಕ್ಕೆ ಕ್ಲಾಸ್ ರೂಂನ್ನೇ ಮಿಡಿಯಾ ಹೌಸ್ ಆಗಿ ನಿರ್ಮಾಣ ಮಾಡಿದ್ದಾರೆ. ಕ್ಲಾಸ್ನಲ್ಲಿ ಕಲಿಯುತ್ತಿದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಮಿಡಿಯಾದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಅನುಭವ ತಮ್ಮ ವಿದ್ಯಾರ್ಥಿನಿಯರಿಗೆ ಸಿಗಲಿ ಎನ್ನುವ ಕಾನ್ಸೆಪ್ಟ್ ಅವರದ್ದಾಗಿದೆ.
ಇದನ್ನೂ ಓದಿ: ತೋಟಗಾರಿಕಾ ವಿವಿ ಘಟಿಕೋತ್ಸವ: ಆಧುನಿಕ ಕೃಷಿ ಪದ್ಧತಿಗೆ ಒತ್ತು ನೀಡುವಂತೆ ರಾಜ್ಯಪಾಲರ ಸಲಹೆ