ವಿಜಯಪುರ: ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಪ್ರಕ್ರಿಯೆಯಲ್ಲಿದ್ದು, ಮುಕ್ತಾಯ ಹಂತದಲ್ಲಿದೆ. ಇದರಿಂದ ನಾಲ್ಕು ತಿಂಗಳಲ್ಲಿ ಮನೆ ಮನೆಗೆ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಾಗೂ ಸಿಂದಗಿ ಪುರಸಭೆಯ ಸಂಯುಕ್ತಾಶ್ರಯದಲ್ಲಿ ನಡೆದ ಸಿಂದಗಿ ಪಟ್ಟಣಕ್ಕೆ ಸಮಗ್ರ ಒಳಚರಂಡಿ ಯೋಜನೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಂದಗಿ ಪಟ್ಟಣಕ್ಕೆ ಬಳಗಾನೂರ ಕೆರೆಯಿಂದ 27.10 ಕೋಟಿ ರೂ. ಶಾಶ್ವತ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 4 ತಿಂಗಳೊಳಗಾಗಿ ಪ್ರತಿ ಮನೆಗೆ 135 ಲೀಟರ್ನಂತೆ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಿಂದಗಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 90. 75 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿಗೆ ಸಂಬಂಧಪಟ್ಟಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಸೂಚಿಸಲಾಗಿದ್ದು, 3 ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ಕಾರಣ ರಾಜ್ಯದಲ್ಲಿ ಲಾಕ್‍ಡೌನ್ ಹೇರಲಾಗಿತ್ತು. ಈ ಕಾರಣದಿಂದಾಗಿಯೇ ಅನೇಕ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಮತ್ತೆ ರಾಜ್ಯ ಸರ್ಕಾರದ ದೃಢ ಸಂಕಲ್ಪದೊಂದಿಗೆ ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಅನುಮೋದನೆಯಾದ ಕಾಮಗಾರಿಗಳು ಮತ್ತೆ ಮರುಜೀವ ಪಡೆದುಕೊಂಡಿದ್ದು, ಯಾವುದೇ ಕಾಮಗಾರಿಗಳು ವಿಳಂಬವಾಗದೆ ತ್ವರಿತಗತಿಯಲ್ಲಿ ಕಾರ್ಯ ಪ್ರಾರಂಭವಾಗಬೇಕು ಎಂದು ಸೂಚಿಸಲಾಗಿದೆ ಎಂದರು.