ವಿಜಯಪುರ: ಅದು ಐತಿಹಾಸಿಕ ನಗರ, ವರ್ಷವಿಡಿ ಸಾವಿರಾರು ದೇಶಿ, ವಿದೇಶಿಯರು ಭೇಟಿ ನೀಡುವ ನಗರಕ್ಕೆ ಸದ್ಯ ಕಾಲಿಡುವ ಸ್ಥಿತಿಯಲ್ಲಿಲ್ಲ. ಸ್ವತಃ ಊರಿನವರೇ ರಸ್ತೆಗಿಳಿಯಲು ಹಿಂಜರಿಯುತ್ತಿದ್ದಾರೆ. ಕಳೆದ ವಾರದಿಂದ ಸುರಿಯುತ್ತಿರೋ ಮಳೆ ಒಂದ್ಕಂಡೆಯಾದ್ರೆ, ಇತ್ತ ರಸ್ತೆ ಮೇಲೆ ಬರ್ತಿರೋ ಚರಂಡಿ ನೀರಿನಿಂದ ಸಾರ್ವಜನಿಕರು ರೋಸಿ ಹೋಗುವಂತಾಗಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ರಸ್ತೆ ಮೇಲೆ ನಿಂತ ನೀರಲ್ಲಿ ಅಲ್ಲಾಡುತ್ತ ಸಾಗುತ್ತಿರುವ ವಾಹನ ಸವಾರರು, ಇನ್ನೊಂದೆಡೆ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ನಾಮಫಲಕ. ಇದು ಗುಮ್ಮಟನಗರಿ ವಿಜಯಪುರದ ಷಾ ಪೇಟೆ, ಶಾಸ್ತ್ರೀಯ ಮಾರುಕಟ್ಟೆ ಹಿಂಭಾದ ರಸ್ತೆ, ಗಣೇಶ ನಗರದ ಸೇರಿದಂತೆ ಹಲವು ಬಡಾವಣೆಯ ಕಥೆ. ಜನರು ಸ್ವಲ್ಪ ಮಳೆಯಾದರೂ ಆತಂಕ ಪಡುವ ಸ್ಥಿತಿ ಇಲ್ಲಿದೆ. ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ವರುಣನ ಆರ್ಭಟಕ್ಕೆ ಚರಂಡಿ ನೀರು ರಸ್ತೆ ಬರ್ತಿರೋದರಿಂದ ನಗರ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಇತ್ತ ಗುಮ್ಮಟನಗರಿಯಲ್ಲಿ ಸ್ವಲ್ಪ ಮಳೆಯಾದ್ರೆ ಹದಗೆಟ್ಟ ರಸ್ತೆಯಲ್ಲಿ ಚರಂಡಿಗಳ ನೀರು ಆವರಿಸುವ ಕಾರಣ ಸಾರ್ವಜನಿಕರು ರಸ್ತೆಗಿಳಿಯಲು ಭಯ ಪಡುವಂತಾಗಿದ್ದು, ಬೇಗ ಚರಂಡಿ ವ್ಯವಸ್ಥೆ ಸುಧಾರಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತಿದ್ದಾರೆ.
ಇನ್ನು ಕಳೆದ ಹಲವು ವರ್ಷಗಳಿಂದ ಮಹಾನಗರ ಪಾಲಿಕೆ ಕೆಲವು ಬಡಾವಣೆಗಳ ಒಳಚಂರಡಿಗಳ ದುರಸ್ತಿಯ ಕ್ರಮಕ್ಕೆ ಮುಂದಾಗದಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಆಯ್ದೆ ಪ್ರದೇಶಗಳ ಮುಖ್ಯ ರಸ್ತೆಗಳಿಗೆ ಮಾತ್ರ ಪಾಲಿಕೆ ಹೊಸ ಚರಂಡಿಗಳ ನಿರ್ಮಾಣಕ್ಕೆ ಮುಂದಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಅಲ್ಲದೇ ಇಬ್ರಾಹಿಂಪುರ ರಸ್ತೆ, ಸಾಯಿ ಪಾರ್ಕ್ ರಸ್ತೆ, ಬಬಲೇಶ್ವರ ನಾಕಾ ಸೇರಿದಂತೆ ಹಲವು ಇಳಿಜಾರು ಪ್ರದೇಶಗಳಲ್ಲಿ ಮಳೆಯಾದ್ರೆ ಚರಂಡಿಗಳ ನೀರು ಮನೆ ನುಗ್ಗುವ ಹಂತಕ್ಕೆ ತಲುಪುವಂತಾಗುತ್ತಿದೆ. ಬೇಸಿಗೆಯಲ್ಲಿ ಮುಗಿಬೇಕಾದ ಒಳಚರಂಡಿ ನಿರ್ಮಾಣದ ಕಾಮಗಾರಿಗಳು ಮಳೆಗಾಲ ಮುಗಿಯುವ ಹಂತಕ್ಕೆ ತಲುಪಿದ್ದರೂ ಪೂರ್ಣಗೊಳ್ಳದಿರೋದರಿಂದ ಪಾಲಿಕೆಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಇತ್ತ ಕೆಲವು ಪ್ರದೇಶಗಳಿಗೆ ಚರಂಡಿಯಿದ್ರೂ ಅವುಗಳಿಗೆ ಮುಚ್ಚಳ ಹಾಕದಿರೋದು ಚರಂಡಿಗಳಿಂದ ದುರ್ವಾಸನೆ ಬೀರುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಒಳಚರಂಡಿಗಳ ಸುಧಾರಣೆಗೆ ಕ್ರಮ ಕೈಗೊಂಡರೆ ನಗರ ನಿವಾಸಿಗಳು ನೆಮ್ಮದಿಯಾಗಿರಬಹುದು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.
ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಐತಿಹಾಸಿಕ ನಗರದಲ್ಲಿ ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದ್ದು ಇನ್ನಾದ್ರೂ ಅಧಿಕಾರಿಗಳು ಎಚ್ಚರಿಕೆ ವಹಿಸಿ ಚರಂಡಿ ಸುಧಾರಣೆ ಕ್ರಮಕ್ಕೆ ಮುಂದಾಗ್ತಾರಾ ಎಂಬುದನ್ನ ಕಾದು ನೋಡ್ಬೇಕಿದೆ.