ವಿಜಯಪುರ: ಪತಿಯ ವರ್ತನೆಗೆ ಬೇಸತ್ತ ಆತನ ಮೂರನೇ ಪತ್ನಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ನಾಲ್ಕನೇ ಮದುವೆ ತಡೆಯಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
![Complaint](https://etvbharatimages.akamaized.net/etvbharat/prod-images/kn-vjp-01-husband-cheating-pkg-7202140_28072020111830_2807f_1595915310_858.jpg)
![Complaint](https://etvbharatimages.akamaized.net/etvbharat/prod-images/kn-vjp-01-husband-cheating-pkg-7202140_28072020111830_2807f_1595915310_567.jpg)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಇಂದಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಪತ್ನಿಯರನ್ನು ಬದಲಿಸುವ ಶೋಕಿ ಹೊಂದಿದ್ದಾನೆಂದು ಆತನ ಪತ್ನಿ ಆರೋಪಿಸಿದ್ದಾರೆ. ಈತನ ಮೊದಲ ಪತ್ನಿಗೆ 8 ವರ್ಷದ ಗಂಡು ಮಗುವಿದ್ದು, ಆಕೆಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದ. ಆಕೆಯನ್ನು ಬಿಟ್ಟು ವಿಜಯಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯನ್ನು 8 ವರ್ಷದ ಹಿಂದೆ ಮದುವೆಯಾಗಿದ್ದಾನೆ. ಇಷ್ಟು ಸಾಲದೆಂದು ಬೆಂಗಳೂರಿನ ವಧು-ವರರ ಕೇಂದ್ರದ ಮೂಲಕ ಧಾರವಾಡದ ಮಹಿಳೆಯೊಬ್ಬಳನ್ನು ಮದುವೆಯಾಗಲು ಹೊರಟಿದ್ದರಿಂದ ಆಕ್ರೋಶಗೊಂಡ ಆತನ 3ನೇ ಪತ್ನಿ, ಮದುವೆ ನಿಲ್ಲಿಸಬೇಕೆಂದು ಕೋರಿ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತನಗೆ ಮೋಸ ಮಾಡಿ ಮದುವೆಯಾದ ಪ್ರಕರಣ ಕೋರ್ಟ್ನಲ್ಲಿರುವಾಗಲೇ ಮತ್ತೊಂದು ಮದುವೆಗೆ ಡಾ. ಮಂಜುನಾಥ ಸಿದ್ಧತೆ ಮಾಡಿಕೊಂಡಿದ್ದಾನೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ಜತೆ 2013ರಲ್ಲಿ ಡಾ. ಮಂಜುನಾಥ ಮದುವೆಯಾಗಿದ್ದಾನೆ. ಮದುವೆಯಾದ ಮೇಲೆ ಆತ ಈ ಹಿಂದೆ ಎರಡು ಮದುವೆಯಾಗಿದ್ದು ನನಗೆ ಗೊತ್ತಾಗಿದೆ. ಈಗ ನಾಲ್ಕನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ. ಇದರಿಂದ ನನ್ನ ಜೀವನ ಹಾಳಾಗಿದೆ. ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.