ವಿಜಯಪುರ: ರಾಜ್ಯದ ಹಲವು ಕಡೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಸಾವು ನೋವು ಸಂಭವಿಸಿದೆ. ಬೆಳೆ ಹಾನಿಯಾಗಿದೆ. ಮತ್ತೊಂದೆಡೆ, ಬಿಸಿಲುನಾಡು ವಿಜಯಪುರದಲ್ಲಿ ಬೇಸಿಗೆ ಉರಿ ಬಿಸಿಲು ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಸೋಮವಾರ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಇದು ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಅದರಲ್ಲೂ 1 ವರ್ಷದೊಳಗಿನ ಮಕ್ಕಳು ಜ್ವರ ಸೇರಿದಂತೆ ಅನೇಕ ರೋಗ ಬಾಧೆಗಳಿಂದ ಬಳಲುತ್ತಿದ್ದಾರೆ.
ಜಿಲ್ಲಾ ಸರ್ಜನ್ ಸಂಗಣ್ಣ ಲಕ್ಕಣ್ಣವರ ಪ್ರತಿಕ್ರಿಯಿಸಿ, "ಬಿಸಿಲು ಹೆಚ್ಚಾಗುತ್ತಿದೆ. ಸಾಕಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವರಲ್ಲಿ ಯಾವುದೇ ಗಂಭೀರ ಕಾಯಿಲೆ ಕಂಡುಬಂದಿಲ್ಲ. ಜ್ವರ ಬಂದಿದೆ ಎಂದು ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ, ಚಿಕಿತ್ಸೆ ನೀಡುತ್ತಿದ್ದೇವೆ" ಎಂದು ತಿಳಿಸಿದರು.
ವೈದ್ಯರ ಸಲಹೆಗಳು: ಹೆಚ್ಚು ಬಿಸಿಲು ಇದ್ದಾಗ ಮಕ್ಕಳು ಹಾಗೂ ವಯೋವೃದ್ಧರು ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಕೆಲ ಸಲಹೆಗಳನ್ನು ವೈದ್ಯರು ನೀಡಿದ್ದಾರೆ. ಇದರಲ್ಲಿ ಮುಖ್ಯವಾಗಿ, ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮನೆಯಿಂದ ಅನವಶ್ಯಕವಾಗಿ ಹೊರಗಡೆ ತಿರುಗಾಡದಂತೆ ನೋಡಿಕೊಳ್ಳಬೇಕಾಗಿದೆ. ಹೋಗಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಹೆಚ್ಚಾಗಿ ನೆರಳು ಪ್ರದೇಶವನ್ನು ಅವಲಂಬಿಸಬೇಕು. ಕೊಡೆ, ಇಲ್ಲವೇ ಟವೆಲ್ ಹೊದಿಕೆ ಇದ್ದರೆ ಒಳಿತು. ಮಕ್ಕಳಿಗೆ ದಿನಕ್ಕೆ ಮೂರು ಬಾರಿಯಾದರೂ ತಣ್ಣೀರಿನಿಂದ ಮೈ ಒರೆಸಬೇಕು.
ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಸಮೀಪದ ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಕ್ಕರೆ ಮಿಶ್ರಿತ ದ್ರವರೂಪದ ಪಾನೀಯಗಳಿಂದ ಆದಷ್ಟು ದೂರವಿರಿ. ಇದರ ಬದಲಿಗೆ ನೀರು ಹಾಗೂ ಎಳೆ ನೀರು ಮೇಲಿಂದ ಮೇಲೆ ಸೇವಿಸುತ್ತಿರಬೇಕು. ಹೆಚ್ಚು ನೀರು ಸೇವಿಸುವುದರಿಂದ ರೋಗದಿಂದ ದೂರವಿರಲು ಸಹಾಯವಾಗುತ್ತದೆ. ಬಿಗಿ ಉಡುಪುಗಳನ್ನು ಧರಿಸದೇ ತೆಳುವಾದ ಉಡುಪು ಹಾಗೂ ಮೈ ಮುಚ್ಚುವಂತೆ ಇರುವ ಉಡುಪುಗಳನ್ನು ಹೆಚ್ಚಾಗಿ ಧರಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಲಸಿಕೆ ಲಭ್ಯವಿಲ್ಲ: ಕೊರೊನಾ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ. ಹೀಗಾಗಿ ಕೋವಿಡ್ ನಿಯಂತ್ರಣ ಲಸಿಕೆ ಸಹ ಜಿಲ್ಲಾಸ್ಪತ್ರೆಯಲ್ಲಿ ಸದ್ಯದ ಮಟ್ಟಿಗೆ ಲಭ್ಯವಿಲ್ಲ. ರಾಜ್ಯ ಸರ್ಕಾರದಿಂದ ಕೋವಿಡ್ ಲಸಿಕೆ ಪೂರೈಕೆಯಾದ ಮೇಲೆ ಮತ್ತೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
2019 ರಲ್ಲಿ ವಿಜಯಪುರದಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2020ರಲ್ಲಿ 42.5 ಡಿಗ್ರಿ ಸೆಲ್ಸಿಯಸ್ ಇತ್ತು. 2023 ಹಾಗೂ ಸೋಮವಾರ 42 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ 45 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ವಿಜಯಪುರ ಜಿಲ್ಲೆಯಲ್ಲಿ ಇನ್ನೊಂದು ವಾರದಲ್ಲಿ ಗರಿಷ್ಠ ತಾಪಮಾನ ದಾಖಲಾಗಬಹುದು ಎನ್ನುವ ಅಂದಾಜು ಇದೆ ಎಂದು ಹಿಟ್ಟನಹಳ್ಳಿಯ ಕೃಷಿ ಮಹಾವಿದ್ಯಾಲಯದ ಹವಾಮಾನ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಹೆಚ್ಚಿದ ಬಿಸಿಲಿನ ಬೇಗೆ: ಈಜುಕೊಳಗಳ ಮೊರೆ ಹೋಗುತ್ತಿರುವ ಯವಕರು