ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಲ್ಲಿಯವರೆಗೆ 7,570 ಪ್ರಕರಣಗಳು ದೃಢಪಟ್ಟಿದ್ದು. 130 ಸಾವು ಸಂಭವಿಸಿವೆ. ಜಿಲ್ಲಾಡಳಿತದಿಂದ ರೋಗದ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಮೃತರ ಪ್ರಕರಣಗಳನ್ನು ವಿಶ್ಲೇಷಿಸಿದಾಗ, ಹೆಚ್ಚು ಸಾವಿನ ಪ್ರಕರಣಗಳಲ್ಲಿ ಸೋಂಕಿತರು ರೋಗವು ತುಂಬಾ ಉಲ್ಬಣಗೊಂಡ ನಂತರ ಆಸ್ಪತ್ರೆಗಳಿಗೆ ದಾಖಲಾಗಿರುವುದು ಕಂಡು ಬಂದಿದೆ. ಕೋವಿಡ್-19 ರೋಗಕ್ಕೆ ಗುರುತಿಸಿರುವ ಆಸ್ಪತ್ರೆಗಳಿಗೆ ದಾಖಲಾಗದೇ, ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಸಾರ್ವಜನಿಕರು ಕೋವಿಡ್- 19 ಲಕ್ಷಣಗಳು ಕಂಡುಬಂದ ತಕ್ಷಣ ಚಿಕಿತ್ಸೆಗಾಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಅಥವಾ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ. ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆ, ಕ್ಯಾನ್ಸರ್ ಶ್ವಾಸಕೋಶದ ಕಾಯಿಲೆ, ಮೂತ್ರಕೋಶದ ಕಾಯಿಲೆ ಇರುವವರು ಆರಂಭಿಕ ಹಂತದಲ್ಲಿಯೇ ದಾಖಲಾಗಬೇಕು ಎಂದರು.
ಖಾಸಗಿ ವೈದ್ಯರು ಈ ಬಗ್ಗೆ ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ದಾಖಲಾಗುವಂತೆ ಸೂಚಿಸಬೇಕು. ನೋಂದಾಯಿತವಲ್ಲದ ವೈದ್ಯರು ಈ ಬಗ್ಗೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಂಡು ಬಂದಲ್ಲಿ ಸಾಂಕ್ರಾಮಿಕ ರೋಗಿಗಳ ಕಾಯ್ದೆಯ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.