ಮುದ್ದೇಬಿಹಾಳ: ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಕೆಟ್ಟ ಜಾತಿ ವ್ಯವಸ್ಥೆ ಕೆಲಸ ಮಾಡಿತ್ತು. ಅದರ ವಿರುದ್ಧ ಸ್ವಾಮೀಜಿಗಳೆಲ್ಲ ಒಟ್ಟಾಗಿ ನಿಂತು ಬಿಜೆಪಿ ಹೈಕಮಾಂಡ್ ನಿರ್ಣಯ ಉಲ್ಟಾ ಮಾಡಿಸಿರುವ ಹೆಮ್ಮೆ ನಮಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದಲ್ಲಿ ಚನ್ನವೀರ ದೇವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಕೊರೊನಾ ಆಪತ್‌ಬಾಂಧವರಿಗೆ ಪ್ರಶಸ್ತಿ ಪ್ರದಾನ, ಧರ್ಮ ಸಮನ್ವಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಡಿಯೂರಪ್ಪನವರು ರಾಜ್ಯದ ತುಂಬ ಸಂಚರಿಸಿ, ತಮ್ಮ ಜೀವನದ ಸುದೀರ್ಘ ಆಯುಷ್ಯವನ್ನು ಪಕ್ಷ ಕಟ್ಟಲು ಸವೆಸಿದ್ದರು. ಇಂತಹ ವ್ಯಕ್ತಿಗೆ ರಾಜ್ಯವನ್ನು ಆಳಲು ಕೆಲವರು ಬಿಡಲಿಲ್ಲ. ಅನ್ಯ ಕಾರ್ಯಕ್ಕೆ ಬೆಂಗಳೂರಿಗೆ ತೆರಳಿದ್ದ ನಮಗೆ ಈ ವಿಷಯ ಗೊತ್ತಾಯ್ತು. ಇದರ ಹಿನ್ನೆಲೆ ಕೆದಕಿದಾಗ ಕೆಟ್ಟ ಜಾತಿ ವ್ಯವಸ್ಥೆ ಯಡಿಯೂರಪ್ಪನವರಿಗೆ ತೊಂದರೆ ಕೊಡುತ್ತಿರುವುದು ಗೊತ್ತಾಯ್ತು. ಈ ನಾಡು, ನಮ್ಮ ಸಂಸ್ಕೃತಿಯನ್ನು ಜಾತಿ ಅನ್ನೋ ಶತ್ರು ನಾಶ ಮಾಡಬಾರದು ಅನ್ನೋ ಕಾರಣಕ್ಕಾಗಿ ನಾವು ಯಡಿಯೂರಪ್ಪನವರ ಪರ ನಿಲ್ಲಬೇಕಾಯಿತು ಎಂದರು.
ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಬೆಲೆ ಕೊಟ್ಟಿತು ಎನ್ನುವ ಸಮಾಧಾನ ನಮಗಿದೆ. ಆದರೂ ಇವರಿಗೆ ಆಡಳಿತ ನಡೆಸಲು ಅವಕಾಶ ಕೊಡಲಿಲ್ಲ ಅನ್ನೋ ನೋವಿದೆ. ಸ್ವಾಮೀಜಿಗಳಿಗೇಕೆ ರಾಜಕೀಯದ ಉಸಾಬರಿ ಅಂತ ಅನೇಕರು ಟೀಕಿಸಿದರು. ಆದರೆ ನಮ್ಮ ದೃಷ್ಟಿಯಲ್ಲಿ ಕಾವಿ ಹಾಕಿಕೊಳ್ಳುವುದು ಊಟ ಮಾಡಿ, ಮಠದಲ್ಲಿ ಮಲಗಲು ಅಲ್ಲ. ನಾಡಿನ ನ್ಯಾಯ, ನೀತಿ, ಸಂಸ್ಕೃತಿಯ ಉಳಿವಿಗಾಗಿ ಹೋರಾಡಲು. ಸ್ವಾಮೀಜಿಗಳು ಅನ್ಯಾಯ, ಅಸಂಸ್ಕೃತಿ, ದುಷ್ಟ ಶಕ್ತಿ ವಿರುದ್ಧ ಹೋರಾಡಬೇಕು. ಅನ್ಯಾಯದ ವಿರುದ್ದ ಸೋಲು ಒಪ್ಪಿಕೊಳ್ಳಬಾರದು. ಅದನ್ನು ನಾವು ಮಾಡಿದ್ದೇವೆ ಎಂದರು.
ಈ ವೇಳೆ ಸಿದ್ದಲಿಂಗ ದೇವರು, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಇಟಗಿ ಮೇಲ ಗದ್ದುಗೆ ಭೂ ಕೈಲಾಸ ಮಠದ ಗುರುಶಾಂತವೀರ ಶಿವಾಚಾರ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ಕೊರೊನಾ ವೇಳೆ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದ ಡಾ. ಮಹಮ್ಮದ ನಾಯ್ಕೋಡಿ, ಡಾ. ರಾಘವೇಂದ್ರ ಮುರಾಳ, ಸಿದ್ದಲಿಂಗ ದೇವರು, ಅಶೋಕ ನಾಡಗೌಡ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೊತೆಗೆ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಾಲತವಾಡದ ಸಂಜನಾ ಹಿರೇಮಠಳನ್ನು ಸನ್ಮಾನಿಸಲಾಯಿತು.