ವಿಜಯಪುರ: 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಲು ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಅವರು ಈಗಾಗಲೇ 8 ಸಕ್ಕರೆ ಕಾರ್ಖಾನೆಗಳ ಮೂಲಕ ಈ ಹಿಂದಿನ ಎಲ್ಲಾ ಬಾಕಿ ಬಿಲ್ ಸಂದಾಯವಾಗಿದ್ದು, ಮುಂದಿನ ಹಂಗಾಮಿನಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಧ್ಯೆ ಸಮನ್ವಯತೆ ಇರಲು ರೈತರಿಗೆ ಸಂದಾಯ ಮಾಡಲಾದ ಕಬ್ಬಿನ ಬಿಲ್ ಜಮೆಯ ಬ್ಯಾಂಕ್ ಸ್ಟೇಟಮೆಂಟ್ ಕಡ್ಡಾಯವಾಗಿ ಸಲ್ಲಿಸುವಂತೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ತಾಕೀತು ಮಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ನಿಯಮ ಕಡ್ಡಾಯ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಮಾತನಾಡುವ ಸಂದರ್ಭದಲ್ಲಿಯೂ ಕಡ್ಡಾಯ ಮಾಸ್ಕ್ ಬಳಸುವ ಬಗ್ಗೆ ತಮ್ಮ ಸಿಬ್ಬಂದಿ ಮತ್ತು ರೈತರಿಗೆ ಅರಿವು ಮೂಡಿಸಬೇಕು. ಕೊರೊನಾ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಬೇಕು.
ಮುಂಬರುವ ಹಂಗಾಮಿನಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಸಕಾಲಕ್ಕೆ ಬಿಲ್ ಪಾವತಿಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.