ವಿಜಯಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತವೇ ಸಾರ್ವಜನಿಕರ ಬಳಿ ತೆರಳುವ 'ಹಳ್ಳಿ ಕಡೆಗೆ ಜಿಲ್ಲಾಧಿಕಾರಿ ನಡಿಗೆ' ಗ್ರಾಮವಾಸ್ತವ್ಯ ನಾಳೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬಮ್ಮನಜೋಗಿ ಗ್ರಾಮದಲ್ಲಿ ನಡೆಯಲಿದೆ.
ಈಗಾಗಲೇ ಜಿಲ್ಲಾಡಳಿತ ಪೂರ್ವ ಸಿದ್ದತೆ ಮಾಡಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿವಿದ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಗ್ರಾಮದ ಜನರು ವಿವಿಧ ಸಮಸ್ಯೆಗಳನ್ನಿಟ್ಟುಕೊಂಡು ಅರ್ಜಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ 55 ಲಿಖಿತ ಅರ್ಜಿಗಳು ಬಂದಿವೆ. ಅವುಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 19 ಅರ್ಜಿಗಳು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಪೆನ್ಸನ್, ಖಾತೆ ಅದಲು ಬದಲು, ಜಮೀನು ವಿವಾದ ಸಂಬಂಧಿಸಿದ ಅರ್ಜಿಗಳಾಗಿವೆ. ಉಳಿದ ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ್ದಾಗಿದೆ.
ಬಮ್ಮನ ಜೋಗಿ ಸ್ಥಿತಿಗತಿ: ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಬಮ್ಮನಜೋಗಿ ಗ್ರಾಮದಲ್ಲಿ ಹಾಸೊಹೊಕ್ಕುವಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ.
ಗ್ರಾಮದಲ್ಲಿ 1ರಿಂದ 8ನೇ ತರಗತಿಯವರೆಗೆ ಒಟ್ಟು 328 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 12 ಕೊಠಡಿಗಳು ಇವೆ. ಇದರಲ್ಲಿ ಕೇವಲ ಎರಡು ಮಾತ್ರ ಸುಸ್ಥಿತಿಯಲ್ಲಿವೆ. 6 ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿದೆ.
4 ಕೊಠಡಿಗಳು ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಶಾಲೆಯ ಸ್ವಲ್ಪ ಜಾಗ ಈಗಾಗಲೇ ಅತಿಕ್ರಮಿಸಲಾಗಿದೆ. ಇದರ ಜೊತೆ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ, ಅದು ದುರಸ್ತಿಗಾಗಿ ಕಾಯುತ್ತಿದೆ. ಇದರ ಜತೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಬಯಲು ಶೌಚ ಮುಕ್ತ ಇಲ್ಲಿ ಕನಸಾಗಿಯೇ ಉಳಿದಿದೆ.
ಓದಿ: ಪಂಚಮಸಾಲಿ ಮೀಸಲಾತಿಗೆ ನನ್ನ ಬೆಂಬಲವಿದೆ : ಡಿಸಿಎಂ ಸವದಿ ಸ್ಪಷ್ಟೀಕರಣ
ವೈಯಕ್ತಿಕ ಶೌಚಾಲಯಗಳು ಇದ್ದರೂ, ನೀರಿನ ಕೊರತೆಯಿಂದ ಬಳಕೆಗೆ ಯೋಗ್ಯವಾಗಿಲ್ಲ. ಮಹಿಳೆಯರಂತೂ ಶೌಚಕ್ಕೆ ತೆರಳಲು ರಾತ್ರಿಯವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಸುಲಭ ಶೌಚಾಲಯ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಇದರ ಜತೆ ಗ್ರಾಮದಲ್ಲಿ ಕೆರೆ ಇದೆ. ಅದು ಬರೋಬ್ಬರಿ 100 ಹೆಕ್ಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಗ್ರಾಮಸ್ಥರ ಪಾಲಿನ ಸಂಜೀವಿನಿಯಾಗಿದೆ. ಆದರೆ, ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಅದನ್ನು ತೆಗೆದರೆ ಈ ಗ್ರಾಮದ ನೀರಿನ ಸಮಸ್ಯೆ ನೀಗಿಸಬಹುದು. ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ನಾಳೆ ನಡೆಸುವ ಗ್ರಾಮ ವಾಸ್ತವ್ಯದಿಂದ ಬಮ್ಮನಜೋಗಿ ನಸೀಬು ಬದಲಾಗುತ್ತಾ ಎಂದು ಕಾದು ನೋಡಬೇಕಾಗಿದೆ.