ವಿಜಯಪುರ: ಸೈಕ್ಲಿಸ್ಟ್ಗಳ ತವರು ಜಿಲ್ಲೆಯ ಕನಸಿನ ಕೂಸಾಗಿರುವ ಸೈಕ್ಲಿಂಗ್ ವೇಲೊಡ್ರಮ್ ಕಾಮಗಾರಿ ಸ್ಥಗಿತಗೊಂಡಿದ್ದು, ಇದಕ್ಕಾಗಿ ಖರ್ಚು ಮಾಡಿದ್ದ ಕೋಟ್ಯಾಂತರ ರೂ. ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
2017 ರಲ್ಲಿ ಮುಗಿಯಬೇಕಾಗಿದ್ದ ಈ ಕಾಮಗಾರಿ ಹಲವು ನ್ಯೂನತೆಯಿಂದ ನೆನೆಗುದಿಗೆ ಬಿದ್ದಿದೆ. ಇದು ಜಿಲ್ಲಾ ಸೈಕ್ಲಿಸ್ಟ್ಗಳ ನಿರಾಸೆಗೆ ಕಾರಣವಾಗಿದೆ. ಕಾಮಗಾರಿ ಸ್ಥಗಿತಕ್ಕೆ ಎಸ್ಎಫ್ಐ ನೀಡಿದ ವರದಿ ಕಾರಣ ಎಂದು ಹೇಳಲಾಗುತ್ತಿದೆ.
ತಾಂತ್ರಿಕ ಕಾರಣ ಜತೆ ಟ್ರ್ಯಾಕ್ ನಿಯಮಾನುಸಾರ ಮಾಡದಿರುವುದು ಮುಖ್ಯ ಕಾರಣವಾಗಿದೆ. ಈಗ ವರದಿ ಕ್ರೀಡಾ ಇಲಾಖೆ ಆಯುಕ್ತರ ಕೈ ಸೇರಿದ್ದು ವೇಲೊಡ್ರಮ್ ಕಾಮಗಾರಿ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ.
ಜಿಲ್ಲೆಯ ಸೈಕ್ಲಿಸ್ಟ್ಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪತಾಕೆ ಹಾರಿಸಿದ್ದಾರೆ. ಆದರೆ ಅವರ ಸಾಧನೆಗೆ ಮೂಲಸೌಲಭ್ಯಗಳ ಕೊರತೆ ಅಡ್ಡಿಯುಂಟು ಮಾಡುತ್ತಿದೆ. ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸೈಕ್ಲಿಂಗ್ ಅಭ್ಯಾಸಕ್ಕಾಗಿ ಟ್ರ್ಯಾಕ್ ಮಾಡಬೇಕು ಎನ್ನುವ ಬೇಡಿಕೆ ಹಲವು ದಶಕಗಳಿಂದ ಕೇಳಿ ಬಂದಿತ್ತು. ಇದಕ್ಕಾಗಿ ನಗರದ ಭೂತನಾಳ ಕೆರೆ ಹೊರವಲಯದಲ್ಲಿ 2014 ರಲ್ಲಿ 8.10 ಎಕರೆ ಭೂಮಿಯಲ್ಲಿ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಿಸಲು ಸರ್ಕಾರ ಸೆಪ್ಟೆಂಬರ್ 28, 2015 ರಲ್ಲಿ ಗುದ್ದಲಿ ಪೂಜೆ ನೆರವೇರಿಸಿತ್ತು.
ಇದಕ್ಕಾಗಿ ಅಂದಾಜು 6.52 ಕೋಟಿ ರೂ. ಅನುದಾನ ಕಾಯ್ದಿರಿಸಿತ್ತು. ದಾವಣಗೆರೆ ಗುತ್ತಿಗೆದಾರರೊಬ್ಬರು 2017ರಲ್ಲಿ ಕಾಮಗಾರಿ ಮುಕ್ತಾಯಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಸರ್ಕಾರ 3.60 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಆದರೆ ತಾಂತ್ರಿಕ ಕಾರಣದ ನೆಪವೊಡ್ಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದೆ.
ಕಳೆದ ಕೆಲ ತಿಂಗಳ ಹಿಂದೆ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (SFI) ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯಲ್ಲಿ ತಾಂತ್ರಿಕ ತೊಂದರೆ ಜತೆ ಟ್ರ್ಯಾಕ್ ನಿಯಮಾನುಸಾರವಾಗಿಲ್ಲ. ಟ್ರ್ಯಾಕ್ ತೆಳಮಟ್ಟದಲ್ಲಿ ತೊಂದರೆ ಇದ್ದು, ಸೈಕ್ಲಿಸ್ಟ್ಗಳಿಗೆ ಅಭ್ಯಾಸದಲ್ಲಿ ಅಪಾಯ ಎದುರಾಗಬಹುದು ಎಂದು ವರದಿ ನೀಡಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿ ಕ್ರೀಡಾ ಇಲಾಖೆ ಅಧಿಕಾರಿಗಳ ಮೂಲಗಳು ತಿಳಿಸಿವೆ.