ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಹಂಡರಗಲ್ಲ ಗ್ರಾಮದ ಬಳಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಮತ್ತೊಬ್ಬ ವ್ಯಕ್ತಿ ಮೊಸಳೆ ದಾಳಿಗೆ ಬಲಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಹಂಡರಗಲ್ಲ ಗ್ರಾಮದ ನಾಗಪ್ಪ ಸಂಜಿವಪ್ಪ ಉಂಡಿ (55) ಎಂದು ಗುರುತಿಸಲಾಗಿದೆ. ಕಳೆದ ವಾರ ಇದೇ ಭಾಗದಲ್ಲಿ ಹಂಡರಗಲ್ಲ ಪಕ್ಕದ ನಾಗರಾಳ ಗ್ರಾಮದ ವ್ಯಕ್ತಿಯನ್ನು ಮೊಸಳೆ ಬಲಿ ಪಡೆದಿತ್ತು.
ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು, ಮೊದಲ ಘಟನೆ ನಡೆದಾಗಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ವ್ಯಾಪಕ ಪ್ರಚಾರ, ಜಾಗೃತಿ ನಡೆಸಿದ್ದರೆ ಇಂದಿನ ಅನಾಹುತ ತಪ್ಪಿಸಬಹುದಿತ್ತು. ಆದರೆ ಅವರು ಡಂಗೂರ ಸಾರುವಂತೆ ಗ್ರಾಮ ಪಂಚಾಯತ್ನವರಿಗೆ ಹೇಳಿ ಕೈ ತೊಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರದೆ ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಅನಾಹುತ ತಡೆಗಟ್ಟಲು ಮುಂದಾಗಬೇಕು ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಹಾಂತೇಶ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.