ವಿಜಯಪುರ: ಭೀಮಾತೀರದ ಹಂತಕ ಮಹಾದೇವ ಭೈರಗೊಂಡ ಗ್ಯಾಂಗ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಮಡುಸ್ವಾಮಿ ಹಿರೇಮಠಗೆ ಜಾಮೀನು ಮಂಜೂರು ಮಾಡಲಾಗಿದೆ. ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೈಲಿನಿಂದ ರೌಡಿಶೀಟರ್ ಮಡುಸ್ವಾಮಿ ಬುಧವಾರ ಸಂಜೆ ಹೊರಬಂದಿದ್ದಾನೆ. ಈ ಹಿನ್ನೆಲೆ ಮಡುಸ್ವಾಮಿ ಬೆಂಬಲಿಗರು ತಡರಾತ್ರಿ ಅಮೋಘ ಸಿದ್ದೇಶ್ವರ ದೇಗುಲದಲ್ಲಿ ತೆಂಗಿನಕಾಯಿ ಒಡೆದು ಸಂಭ್ರಮಿಸಿದ್ದಾರೆ.
ಏನಿದು ಪ್ರಕರಣ?: ಕಳೆದ 2020ರ ನವೆಂಬರ್ 2 ರಂದು ಭೀಮಾತೀರದ ಹಂತಕ ಮಹಾದೇವ ಭೈರಗೊಂಡ ಮೇಲೆ ಫೈರಿಂಗ್ ನಡೆದಿತ್ತು. ಕನ್ನಾಳ ಬಳಿ ಕಾರಿನಲ್ಲಿ ಚಡಚಣಗೆ ಹೋಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿತ್ತು. ತೀವ್ರವಾಗಿ ಗಾಯೊಗೊಂಡಿದ್ದ ಮಹಾದೇವ ಭೈರಗೊಂಡ ಬದುಕುಳಿದಿದ್ದೇ ಪವಾಡವಾಗಿತ್ತು. ದಾಳಿ ವೇಳೆ ಭೈರಗೊಂಡ ಮೇಲೆ 6 ಸುತ್ತು ಗುಂಡು ಹಾರಿಸಲಾಗಿತ್ತು.
ಈ ಗ್ಯಾಂಗ್ ವಾರ್ನಲ್ಲಿ ಮಹಾದೇವ ಭೈರಗೊಂಡ ಕಾರಿನ ಡ್ರೈವರ್ ಲಕ್ಷ್ಮಣ ದಿಂಡೋರೆ, ಮ್ಯಾನೇಜರ್ ಬಾಬುರಾಯ್ ಕಂಚನಾಳಕರ್ ಸಾವನ್ನಪ್ಪಿದ್ದರು. ಈ ಸಂಬಂಧ ಚಡಚಣ ಗ್ಯಾಂಗಿನ 40 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಮಡುಸ್ವಾಮಿ ಹಿರೇಮಠ ಎ1 ಆರೋಪಿಯಾಗಿದ್ದರು. ಸದ್ಯ ಮಡುಸ್ವಾಮಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಜನರನ್ನು ಬೆಚ್ಚಿಬೀಳಿಸುವ ಘಟನೆಗಳು ವರದಿಯಾಗುತ್ತಲೇ ಇವೆ. ಇತ್ತೀಚೆಗೆ ವಿಜಯಪುರ ರಸ್ತೆಯಲ್ಲಿನ ಕುಬೋಟೋ ಏಜೆನ್ಸಿ ಎದುರು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ರೇಣುಕಾ ನಗರದ ನಿವಾಸಿ ಗಂಗೂಬಾಯಿ ಮೀಸಿ ಯಲ್ಲಪ್ಪ ಯಂಕಂಚಿ (28) ಮೃತರು.
ಸಂಬಂಧಿಕ ಯುವಕನೊಂದಿಗೆ ವಿಜಯಪುರದಿಂದ ಸಿಂದಗಿಯತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ವೇಳೆ ಹಿಂಬಾಲಿಸುತ್ತ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಯುವತಿ ಕತ್ತಿಗೆ ಚಾಕುವಿನಿಂದ ಇರಿದಿದ್ದರು. ಇದರಿಂದ ತೀವ್ರ ರಕ್ತಸ್ರಾವವಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಚೂರಿ ಇರಿದ ಬಳಿಕ ದುಷ್ಕರ್ಮಿಗಳು ಆಕೆಯ ವಾಹನವನ್ನೂ ತೆಗೆದುಕೊಂಡು ಪರಾರಿಯಾಗಿದ್ದರು.
ಅದಕ್ಕೂ ಮೊದಲು ಶಾಲೆಗೆ ಹೋಗಿದ್ದ ಬಾಲಕಿಯನ್ನು ಅಪಹರಣ ಮಾಡಿರುವ ಘಟನೆಯೊಂದು ನಡೆದಿತ್ತು. ನಗರದ ಹೊರವಲಯದ ಖಾಸಗಿ ಪಿಯು ಕಾಲೇಜಿನ ವ್ಯಾನ್ ಚಾಲಕನ ಪ್ರೀತಿಯ ಬಲೆಗೆ ಬಿದ್ದಿದ್ದ ವಿದ್ಯಾರ್ಥಿನಿ ಜೂ.7ರಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದವಳು ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ನೀಡಲಾಗಿತ್ತು. ದೂರು ಆಧರಿಸಿ ತನಿಖೆ ಆರಂಭಿಸಿದ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿ 2 ದಿನಗಳ ಹಿಂದೆ ವಿದ್ಯಾರ್ಥಿನಿ ಸಮೇತ ಆರೋಪಿಯನ್ನು ವಾಪಸ್ ವಿಜಯಪುರಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ಬಳಿ ಹೃದಯವಿದ್ರಾವಕ ಘಟನೆ: ಇಬ್ಬರು ಮಕ್ಕಳ ಬರ್ಬರ ಹತ್ಯೆ, ಹೆಂಡ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಎಸ್ಕೇಪ್