ವಿಜಯಪುರ: ಕೋವಿಡ್ ನಿಯಂತ್ರಣಕ್ಕಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಕೋವಿಡ್ ರೋಗಿಗಳನ್ನು ಸಕಾಲಕ್ಕೆ ಮತ್ತು ಆದ್ಯತೆ ಮೇಲೆ ಚಿಕಿತ್ಸೆಗೆ ಒಳಪಡಿಸಿದ್ದು, ಹೆಚ್ಚಿನ ಗುಣಮುಖರಾದವರನ್ನು ಆಸ್ಪತ್ರೆಗಳಿಂದ ಬಿಡುಗಡೆಗೊಳಿಸಿದೆ. ಅದರಂತೆ ವಿಜಯಪುರ ಜಿಲ್ಲೆ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಗುಣಮುಖ ವ್ಯಕ್ತಿಗಳನ್ನು ಬಿಡುಗಡೆಗೊಳಿಸುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾವಾರು ಒಟ್ಟು ಕೋವಿಡ್ ಪಾಸಿಟಿವ್ ಹೊಂದಿದ ರೋಗಿಗಳು ಗುಣಮುಖರಾದವರಲ್ಲಿ ವಿಜಯಪುರ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಹೊಂದಿದ್ದು, ಆರೋಗ್ಯ ಇಲಾಖೆ, ವೈದ್ಯರ ವ್ಯವಸ್ಥಿತ ಸಹಕಾರ ಹಾಗೂ ಚಿಕಿತ್ಸೆಗಳಿಂದಾಗಿ ಇಂದು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ ಎಂದರು.
ವಿಜಯಪುರ ಜಿಲ್ಲೆಯು ಬೆಂಗಳೂರಿನ ನಂತರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೋಮ್ ಐಸೋಲೇಶನ್ ಮಾಡಿರುವ ಜಿಲ್ಲೆಯಾಗಿದೆ. ಹೋಮ್ ಐಸೋಲೇಷನ್ ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದಾಗಿದೆ. ಈ ದೆಸೆಯಲ್ಲಿ ಹೆಚ್ಚಿನ ರೋಗಿಗಳನ್ನು ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆಗೆ ಒಳಪಡಿಸಿ ಗುಣಮುಖಗೊಳಿಸುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
ಆರ್.ಟಿ.ಪಿ.ಸಿ.ಆರ್ ಲ್ಯಾಬ್‍ಗಳನ್ನು ಈಗಾಗಲೇ ನಗರದ ಜಿಲ್ಲಾಸ್ಪತ್ರೆ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಎರಡು ಶಿಫ್ಟ್‌ನಲ್ಲಿ ಕೋವಿಡ್ ಗಂಟಲು ದ್ರವ ಮಾದರಿ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ 3 ಶಿಫ್ಟ್‌ಗಳಲ್ಲಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ರೋಗಿಗಳನ್ನು ಗುರುತಿಸಲು ಸಾಧ್ಯವಾಗಲಿದೆ. ಮೂರನೇ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸಲು ಕೊರತೆಯಿರುವ ಲ್ಯಾಬ್ ಟೆಕ್ನಿಶಿಯನ್‍ಗಳ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.
ಆರ್.ಟಿ.ಪಿ.ಸಿ.ಆರ್ ಲ್ಯಾಬ್‍ನಲ್ಲಿ ಈಗಾಗಲೇ ಒಂದು ಶಿಫ್ಟ್‌ನಲ್ಲಿ ಸುಮಾರು 90 ರಷ್ಟು ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದ್ದ್ದು, ಸದ್ಯ ಜಿಲ್ಲೆಯಲ್ಲಿ ಪ್ರತಿದಿನ 150 ರಿಂದ 180 ರವರೆಗೆ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಲ್ಯಾಬ್‍ನಲ್ಲಿ ಕೈಗೊಳ್ಳಲಾಗುತ್ತಿದೆ. ಮೂರು ಶಿಫ್ಟ್‌ಗಳಲ್ಲಿ ಪರೀಕ್ಷೆ ಪ್ರಾರಂಭವಾದರೆ ಸುಮಾರು 300ರ ವರೆಗೆ ಮಾಡಬಹುದಾಗಿದ್ದು, ಈ ಗುರಿಯನ್ನು ಮುಟ್ಟುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಕೋವಿಡ್-19ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪಡೆಯುವಾಗ ವ್ಯಕ್ತಿಯ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಲಾಗುತ್ತದೆ. ಮೊಬೈಲ್ ಸಂಖ್ಯೆಗೆ ಒಟಿಪಿ ಬರುವ ಕಾರಣದಿಂದಾಗಿ ಯಾವುದೇ ರೀತಿಯಲ್ಲಿ ವ್ಯಕ್ತಿಗಳು ಸುಳ್ಳು ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಒಂದು ವೇಳೆ ಪಾಸಿಟಿವ್ ಬಂದರೆ ಅವರಿಗೆ ಹೋಮ್ ಐಸೋಲೇಷನ್ ಅಥವಾ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಇದರ ಜೊತೆಗೆ ಕೋವಿಡ್ ಸೆಂಟರ್‌ಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.