ವಿಜಯಪುರ: ಕಳೆದ ಒಂದೂವರೆ ವರ್ಷದಿಂದ ಕೊರೊನಾ ವಾರಿಯರ್ಸ್ ಆಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟಾಫ್ ನರ್ಸ್ ಕೊರೊನಾಗೆ ಬಲಿಯಾಗಿದ್ದಾರೆ.
ವಿಜಯಪುರ ನಗರ ನಿವಾಸಿ 38 ವರ್ಷದ ವಿನೋದಕುಮಾರ ಪಾಟೀಲ ಎಂಬ ನರ್ಸ್ಗೆ ಕಳೆದ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.
ತಕ್ಷಣ ಅದೇ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ವೈದ್ಯರು ಸಹ ಕೆಲಸ ಹೆಚ್ಚಾಗಿದ್ದರಿಂದ ಒತ್ತಡದಿಂದ ಈ ರೀತಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಬೆಳಗ್ಗೆ ಸರಿ ಹೋಗುತ್ತಾರೆ ಎಂದು ಅವರ ಕುಟುಂಬದವರಿಗೆ ಆಶ್ವಾಸನೆ ನೀಡಿದ್ದಾರೆ. ಆದರೆ ಆರೋಗ್ಯ ಹದಗೆಟ್ಟು 12 ಗಂಟೆಯೊಳಗೆ ನರ್ಸ್ ವಿನೋದಕುಮಾರ ಸಾವನ್ನಪ್ಪಿದ್ದಾರೆ.
ಅವರಿಗೆ ತಂದೆ, ತಾಯಿ ಪತ್ನಿ ಹಾಗೂ ಮೂವರು ಮಕ್ಕಳಿದ್ದು, ಮನೆಯ ಆಸರೆಯಾಗಿದ್ದ ವಿನೋದಕುಮಾರ ಈಗ ಈಹಲೋಕ ತ್ಯಜಸಿದ್ದು ಅವರ ಕುಟುಂಬ ವರ್ಗಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ.