ಮುದ್ದೇಬಿಹಾಳ: ತಾಲೂಕು ಪಂಚಾಯಿತಿಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಪಂ ಕಚೇರಿಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಿ ಇಓ ಶಶಿಕಾಂತ ಶಿವಪೂರೆ ಆದೇಶಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ತಾಲೂಕು ಪಂಚಾಯಿತಿ ಸಿಬ್ಬಂದಿಯು ನಿತ್ಯವೂ ಜಮ್ಮಲದಿನ್ನಿ ಕೋವಿಡ್ ಕೇರ್ ಸೆಂಟರ್‌ಗೆ ಸೋಂಕಿತರನ್ನು ದಾಖಲಿಸುತ್ತಿದ್ದರು. ಈ ವೇಳೆ ಸಿಬ್ಬಂದಿಗೆ ಸೋಂಕು ತಗುಲಿದೆ. ಮುಂಜಾಗ್ರತಾ ಕ್ರಮವಾಗಿ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ನಿಲ್ಲದ ವ್ಯಾಪಾರ ವಹಿವಾಟು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಇನ್ನೊಂದು ಕಡೆ ದೈನಂದಿನ ಹಣ್ಣು, ತರಕಾರಿ ವ್ಯಾಪಾರವೂ ನಡೆಯುತ್ತಿದೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಹಳೇ ತಹಶೀಲ್ದಾರ್ ಕಚೇರಿಯವರೆಗೆ ತಳ್ಳುಗಾಡಿಗಳಲ್ಲಿ ವ್ಯಾಪರ ನಡೆಸಲಾಗುತ್ತಿದೆ. ಮನೆಗಳಿಗೆ ತೆರಳಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೂ, ಮಾರುಕಟ್ಟೆಗೆ ಮೊದಲಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಬರುತ್ತಿದ್ದಾರೆ.
ಸ್ವಯಂಪ್ರೇರಿತ ಲಾಕಡೌನ್ ಬೆಂಬಲ: ಆಗಸ್ಟ್ 3ರಿಂದ ಕೊರೊನಾ ತಡೆಗೆ ವಿಧಿಸಿದ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಹೊಟೇಲ್, ಜವಳಿ, ದಿನಸಿ ಹಾಗೂ ಕೆಲ ಮಾಲೀಕರು ಬೆಂಬಲ ಸೂಚಿಸಿದ್ದು, ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದಾರೆ.