ವಿಜಯಪುರ: ಕೋವಿಡ್-19 ಪಾಸಿಟಿವ್ ರೋಗಿ ಸಂಖ್ಯೆ 8789 ಮಹಿಳೆಗೆ ಸಹಜ ಹೆರಿಗೆ ಮಾಡಿಸುವಲ್ಲಿ ಡಾ. ಮನ್‍ಪ್ರೀತ್ ಕೌರ್ ಅವರನ್ನು ಒಳಗೊಂಡ ತಂಡ ಯಶಸ್ವಿಯಾಗಿದ್ದು, ಅವಳಿ ಹೆಣ್ಣು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾಳೆ. ತಾಯಿ ಹಾಗೂ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೋವಿಡ್-19 ಪಾಸಿಟಿವ್ ಮಹಿಳೆಗೆ ಜನಿಸಿದ ಅವಳಿ ಹೆಣ್ಣು ಮಕ್ಕಳಲ್ಲಿ ಮೊದಲು ಮಗು 2.0 ಕೆಜಿ ಹಾಗೂ ಎರಡನೇ ಮಗು 2.1 ಕೆಜಿ ತೂಕವಿದ್ದು, ತಾಯಿ ಸೇರಿದಂತೆ ಅವಳಿ ಹೆಣ್ಣು ಮಕ್ಕಳು ಆರೋಗ್ಯವಂತರಾಗಿದ್ದಾರೆ. ಡಾ. ಮನ್‍ಪ್ರೀತ್ ಕೌರ್ ತಹರೀಯಾ, ಸಿಸ್ಟರ್ ಕಾಶೀಬಾಯಿ, ಡಾ. ಉಪಾಸೆ, ರವಿ ಕೂಚಬಾಳ, ಮೊಹಸೀನ್ ಮಮದಾಪೂರ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ ಅವರನ್ನು ಒಳಗೊಂಡ ವೈದ್ಯರ ತಂಡ ಕೋವಿಡ್-19 ಮಹಿಳೆಗೆ ಸಹಜ ಮತ್ತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ವೈದ್ಯರ ತಂಡದ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ. ಮನ್‍ಪ್ರೀತ್ ಕೌರ್ ತಹರೀಯಾ, ಇದು ಎರಡನೇ ಪ್ರಕರಣವಾಗಿದ್ದು, ಅನಿಮಿಯಾದಿಂದ ಬಳಲುತ್ತಿದ್ದ ಈ ಮಹಿಳೆಗೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಎಲ್ಲ ಸಿಬ್ಬಂದಿಯ ಸಹಕಾರದೊಂದಿಗೆ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಲಾಯಿತು. ಅವಳಿ ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.