ವಿಜಯಪುರ: ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಜೋಳ ಬೆಳೆಯುವ ಜೋಳದ ಕಣಜವೆಂದೇ ಕರೆಯುವ ವಿಜಯಪುರ ಜಿಲ್ಲೆಯಲ್ಲಿ ಕಳೆದ 8-10 ವರ್ಷಗಳಿಂದ ಜೋಳ ಬೆಳೆ ತೆಗೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ರೊಟ್ಟಿ ಊಟ ಮಾಡುವವರು ಜೋಳ ಇಲ್ಲದೇ ಬ್ಲ್ಯಾಕ್ ಮಾರುಕಟ್ಟೆ, ಇಲ್ಲವೇ ಬೇರೆ ಜಿಲ್ಲೆಯಿಂದ ಹೆಚ್ಚುವರಿ ಹಣ ತೆತ್ತು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.
ಸಾಕಷ್ಟು ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದರೂ ಇಳುವರಿ ಕಡಿಮೆಯಾಗುತ್ತಿರುವ ಕಾರಣ ಅನ್ನದಾತರು ಜೋಳ ಬಿಟ್ಟು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುತ್ತಿರುವ ತೊಗರಿ ಬೆಳೆಗೆ ಮಾರು ಹೋಗಿದ್ದಾರೆ. ಈಗ ಮತ್ತೆ ಜೋಳ ಬೆಳೆ ಬೆಳೆಯುವ ನಿಟ್ಟಿನಲ್ಲಿ ರೈತರನ್ನು ಆಕರ್ಷಿಸಲು ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರ ಎರಡು ಹೊಸ ತಳಿಗಳನ್ನು ಸಂಶೋಧಿಸಿ ಪ್ರತಿ ಗ್ರಾಮದಲ್ಲಿ 1 ಎಕರೆ ಜಾಗದಲ್ಲಿ ಪ್ರಾತ್ಯಕ್ಷಿಕೆ ನಡೆಸುತ್ತಿದೆ.
ಸಂಸ್ಥೆಯು ಬಿಜೆವಿ- 44 ಮತ್ತು ಸಿಎಸ್ ವಿ-29ಆರ್ ಈ ಎರಡು ತಳಿಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಜೋಳ ಬೆಳೆಯುವುದು ಹಾಗೂ ಕಪ್ಪು ಭೂಮಿಯಲ್ಲಿ ಹೆಚ್ಚು ಇಳುವರಿ ಕೊಡುವುದು ಈ ಎರಡು ಹೊಸ ತಳಿಗಳ ಗುಣಧರ್ಮವಾಗಿದೆ. ಜೋಳ ದಂಡಿನಲ್ಲಿ ಹೆಚ್ಚು ಕಾಳು ದೊರೆಯುತ್ತಿರುವ ಕಾರಣ ಮತ್ತೆ ರೈತ ಜೋಳ ಬೆಳೆಯಲು ಆಸಕ್ತಿ ತೋರುತ್ತಿದ್ದಾನೆ. 10 ವರ್ಷದ ಹಿಂದೆ 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು.
ಮುಂದೆ ತೊಗರಿ ಲಾಭ ನೋಡಿ ರೈತರು ತಮ್ಮ ಮನೆಗೆ ಬೇಕಾಗುವಷ್ಟು ಜೋಳ ಬೆಳೆಯಲು ಆರಂಭಿಸಿದ ಮೇಲೆ ಕೇವಲ 50 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿತ್ತು. ಹೀಗಾಗಿ ರೊಟ್ಟಿ ಊಟ ಅವಲಂಬಿಸಿದ್ದ ಜನರು ಜೋಳಕ್ಕೆ ಪರಿತಪಿಸಬೇಕಾಗಿತ್ತು. ಜೋಳದ ಕಡಿಮೆ ಇಳುವರಿಯಿಂದ ಪ್ರತಿ ಕ್ವಿಂಟಲ್‌ಗೆ 5 ಸಾವಿರ ರೂದಷ್ಟು ಬೆಳೆ ಏರಿಕೆ ಕಂಡಿತ್ತು. ಈಗ ಹೊಸ ತಳಿಗಳು ಸಂಶೋಧನೆಯಾದ ಮೇಲೆ ರೈತರು ಮತ್ತೆ ಜೋಳವನ್ನು ತೊಗರಿ ಜತೆ ಬೆಳೆಯಲು ಆರಂಭಿಸಿದ್ದಾರೆ.
ಹೊಸ ತಳಿಗಳ ಗುಣಧರ್ಮ: ಕೃಷಿ ಮಹಾವಿದ್ಯಾಲಯದ ಸಂಶೋಧನಾ ಘಟಕದಿಂದ ಅಖಿಲ ಭಾರತ ಸಮನ್ವಯ ಜೋಳ ಅಭಿವೃದ್ಧಿ ಯೋಜನೆಯಡಿ ಬಿಜೆವಿ- 44 ಹಾಗೂ ಸಿಎಸ್ ವಿ 29 ಆರ್ ಎರಡು ತಳಿಗಳನ್ನು ಸಂಶೋಧನೆ ಮಾಡಲಾಗಿದೆ. ಇದು ಹೆಚ್ಚು ಕಪ್ಪು ಮಣ್ಣಿನಲ್ಲಿ ಉತ್ತಮ ಇಳುವರಿ ಬರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಭೂಮಿ ಕಪ್ಪು ಮಣ್ಣು ಹೊಂದಿರುವ ಕಾರಣ ಸುಲಭವಾಗಿ ಎರಡು ತಳಿಗಳು ಹೆಚ್ಚು ಇಳುವರಿ ನೀಡಬಲ್ಲವು. ಇದರ ಜೊತೆಗೆ ಬಿಸಿ ರೊಟ್ಟಿ ರುಚಿ ಹಾಗೂ ಸ್ವಾದಕರವಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ಯಾವುದೇ ಕೆಮಿಕಲ್ ಬಳಸದೇ ಸಿರಿಧಾನ್ಯ ಗೊಬ್ಬರ ಬಳಕೆಯಿಂದ ಜೋಳ ಬೆಳೆಯುವ ಕಾರಣ ಅಲ್ಲದೇ ಹೆಚ್ಚು ದಪ್ಪ ತೆನೆ, ಕಾಳು ಗೊಂಚು ಹೆಚ್ಚಿರುವ ಕಾರಣ ರೈತರಿಗೆ ಜನರಿಗೆ ಈ ತಳಿಗಳು ಲಾಭದಾಯಕವಾಗಿವೆ.
ಹೆಚ್ಚು ಮೇವು ಸಂಗ್ರಹಣೆ: ಜೋಳ ಬಿಡಿಸಿದ ಮೇಲೆ ಉಳಿಯುವ ದಂಟುಗಳು ಜಾನುವಾರುಗಳ ಮೇವಿಗೆ ಹೆಚ್ಚು ಉಪಯೋಗ ಆಗಬಲ್ಲದು. ಈ ಮೇವು ಜಾನುವಾರುಗಳ ಆರೋಗ್ಯಕ್ಕೂ ಪೂರಕವಾಗಿವೆ. ಜೋಳದ ಜೊತೆ ಮೇವು ಸಹ ರೈತರ ಆದಾಯಕ್ಕೆ ಸಹಕಾರಿಯಾಗಬಲ್ಲದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಮತ್ತೆ ಜೋಳದತ್ತ ವಿಜಯಪುರ ರೈತರ ಚಿತ್ತ?: ವಿಜಯಪುರ ಜಿಲ್ಲೆ ಪ್ರವಾಸಿ ತಾಣಗಳಿಗೆ ಹೆಸರುವಾಸಿ. ವಿವಿಧ ರಾಜ್ಯ, ದೇಶ, ವಿದೇಶಗಳಿಂದ ಗೋಲಗುಮ್ಮಟ ಸೇರಿದಂತೆ ಹಲವು ಸ್ಮಾರಕ ವೀಕ್ಷಣೆಗೆ ಬರುವ ಪ್ರವಾಸಿಗರು ಹೆಚ್ಚಾಗಿ ಇಷ್ಟಪಡುವುದು ಜೋಳದ ರೊಟ್ಟಿ ಊಟ. ಇದಕ್ಕಾಗಿ ಜಿಲ್ಲೆಯಲ್ಲಿ ಖಾನಾವಳಿ (ಹೋಟೆಲ್)ಗಳು ತಲೆ ಎತ್ತಿವೆ. ಪ್ರವಾಸಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗ ಸ್ಮಾರಕ ವೀಕ್ಷಣೆ ಜೊತೆ ಜೋಳದ ರೊಟ್ಟಿ, ತರೇವಾರಿ ಪಲ್ಯ ಸವಿಯುವುದು ವಾಡಿಕೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಸಿಸುವ ಜನರಿಗೆ ಸಹ ಜೋಳದ ರೊಟ್ಟಿ ಊಟ ಬೇಕೆ ಬೇಕು. ಹೀಗಾಗಿ ಹೆಚ್ಚು ಹಣ ನೀಡಿಯಾದರೂ ಜೋಳ ಖರೀದಿ ಮಾಡುತ್ತಾರೆ. ಈಗ ಎರಡು ಹೊಸ ತಳಿಗಳನ್ನು ರೈತ ತಮ್ಮ ಹೊಲದಲ್ಲಿ ಬೆಳೆಯಲು ಆರಂಭಿಸಿದರೆ, ಜೋಳದ ಕೊರತೆ ಇರುವುದಿಲ್ಲ. ಇದರ ಜೊತೆಗೆ ರೈತ ಸಹ ಆರ್ಥಿಕವಾಗಿ ಸಬಲರಾಗಬಲ್ಲನು.
ಇದನ್ನೂ ಓದಿ: ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನ: ಬಿ.ಸಿ.ಪಾಟೀಲ್