ಮುದ್ದೇಬಿಹಾಳ (ವಿಜಯಪುರ): ಮಂಗಳಮುಖಿಯರೊಂದಿಗೆ ಜನ್ಮದಿನ ಆಚರಿಸಿಕೊಂಡ ಹಾಸ್ಯ ಕಲಾವಿದ ಗೋಪಾಲ ಇಂಚಗೇರಿ ಅವರು ಪಟ್ಟಣದ ಸಂತ ಕನಕದಾಸ ಶಾಲೆಯ ಆವರಣದಲ್ಲಿ ದಿನಸಿ ಕಿಟ್ ವಿತರಣೆ ಮಾಡಿದರು.
ಕೊರೊನಾ ಲಾಕ್‌ಡೌನ್‌ದಿಂದ ತೊಂದರೆಗೊಳಗಾದ ಬಿದರಕುಂದಿ ಕ್ರಾಸ್ ಬಳಿ ಇರುವ ಅಲೆಮಾರಿ ಜನಾಂಗದವರಿಗೆ ಅವರು ಬಿರಿಯಾನಿ ಊಟ ವಿತರಿಸಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಮಾತನಾಡಿ, ಸಮಾಜದಲ್ಲಿ ಎಲ್ಲ ವರ್ಗದವರನ್ನು ಗುರುತಿಸಿ ಸಹಾಯ, ಸಹಕಾರ ನೀಡುತ್ತಿದ್ದಾರೆ. ಆದರೆ ಮಂಗಳಮುಖಿಯವರನ್ನು ಯಾರೂ ಗುರುತಿಸಿರಲಿಲ್ಲ. ಕಲಾವಿದರಾದ ಗೋಪಾಲ ಹೂಗಾರ ಹಾಗೂ ಅವರ ಸ್ನೇಹಿತರು ಮಂಗಳಮುಖಿಯರನ್ನು ಗುರುತಿಸಿದ್ದು ಶ್ಲಾಘನೀಯ ಎಂದರು.
ದಿನಸಿ ಕಿಟ್ ಸ್ವೀಕರಿಸಿದ ಮಂಗಳಮುಖಿಯರು ಮಾತನಾಡಿ, ನಮ್ಮನ್ನು ಕಂಡರೆ ಜನ ಹೀಯಾಳಿಸಿ ಮಾತನಾಡಿ ಅಪಮಾನಿಸುತ್ತಾರೆ. ಆದರೆ ಇವತ್ತು ಇಂಚಗೇರಿ ಅವರು ಜನ್ಮ ದಿನವನ್ನು ನಮ್ಮ ಜೊತೆಗೆ ಆಚರಿಸಿದ್ದು ಖುಷಿಯಾಗಿದೆ ಎಂದರು.