ವಿಜಯಪುರ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ಎಸ್ ಹಾಗೂ ಕಬಿನಿ ಜಲಾಶಯದ ನಂತರ ಆಲಮಟ್ಟಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಾಗಿನ ಅರ್ಪಿಸಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆಲಮಟ್ಟಿ ಹೆಲಿಪ್ಯಾಡ್ಗೆ ಬಂದಿಳಿದ ಅವರು ನೇರವಾಗಿ ಆಲಮಟ್ಟಿ ಜಲಾಶಯ ವೀಕ್ಷಣೆಗೆ ತೆರಳಿದರು.
ಸಿಎಂ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇಲ್ಲದಿದ್ದರೂ ಜಿಲ್ಲಾಡಳಿತ ಬಾಗಿನ ಅರ್ಪಣೆಗೆ ಸಿದ್ಧತೆ ಮಾಡಿಕೊಂಡಿತ್ತು. ಇದನ್ನು ಗಮನಿಸಿದ ಸಿಎಂ ಭರ್ತಿಯಾಗಿ ಭೋರ್ಗರೆಯುತ್ತಿದ್ದ ಕೃಷ್ಣಾ ಜಲಾಶಯಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಮೊದಲು ಜಲಾಶಯದಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸಿಎಂ ಯಡಿಯೂರಪ್ಪ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ , ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.