ಮುದ್ದೇಬಿಹಾಳ (ವಿಜಯಪುರ): ಎಲ್ಲೆಡೆ ಕೊರೊನಾ ಅಬ್ಬರ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಪೌರಕಾರ್ಮಿಕನೊಬ್ಬ ಪಟ್ಟಣದಲ್ಲಿ ತುಂಬಿದ್ದ ಚರಂಡಿ ಶುಚಿಗೊಳಿಸಲು ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೇ ಮೈ ಬಗ್ಗಿಸಿ ಕೈಯ್ಯಲ್ಲೇ ಸ್ವಚ್ಛತೆಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮ್ಯಾಗೇರಿ ಎಂಬುವವರು ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಈ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, ಪೌರಕಾರ್ಮಿಕರಿಗೆ ಸುರಕ್ಷತಾ ಸಾಧನಗಳಿಲ್ಲವೇ? ಇದ್ದರೂ ಅವರು ಬರಿಗೈಯ್ಯಲ್ಲಿ ಇಡೀ ಓಣಿಯೊಂದರ ಕೊಳಚೆ ಶುಚಿಗೊಳಿಸಿರುವುದು ಅಮಾನವೀಯತೆಯಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಳೆ ಬಂದ ಕಾರಣ ಎಲ್ಲಾ ಚರಂಡಿಗಳು ಬ್ಲಾಕ್ ಆಗಿದ್ದವು. ಮುದ್ದೇಬಿಹಾಳ ಪಟ್ಟಣದ ಶಾಂತೇಶ್ವರ ಸೂಪರ್ ಮಾರ್ಕೆಟ್ ಹಿಂದೆ ಇರುವ ಚರಂಡಿ ತುಂಬಿಕೊಂಡಿದ್ದನ್ನು ಪೌರಕಾರ್ಮಿಕರೊಬ್ಬರು ಬರಿಗೈಯ್ಯಲ್ಲಿ ಸ್ವಚ್ಛಗೊಳಿಸಿದ್ದಾರೆ.
ಪೌರಕಾರ್ಮಿಕರಿಗೆ ಸರಕಾರ ಹ್ಯಾಂಡ್ ಗ್ಲೌಸ್, ಬೂಟು ಹಾಗೂ ಸಮವಸ್ತ್ರಗಳನ್ನು ಕೊಟ್ಟಿದೆ. ಆದರೆ, ಈ ಕಾರ್ಮಿಕ ಯಾಕೆ ಬಳಸಿಲ್ಲ ಎಂಬುವುದು ತಿಳಿದು ಬಂದಿಲ್ಲ. ಚರಂಡಿಯೊಳಗೆ ಕೊನೆಯ ಅಂಚಿನವರೆಗೆ ಶೇಖರವಾಗಿದ್ದ ಕಸವನ್ನು ಹೊರ ತೆಗೆಯಲು ಈ ರೀತಿ ಮಾಡಿದ್ದಾಗಿ ಕಾರ್ಮಿಕ ಹೇಳಿಕೊಂಡಿದ್ದಾರೆ. ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರ ಆರೋಗ್ಯದ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಬೇಕು ಎಂಬ ಆಗ್ರಹಗಳು ಜನರಿಂದ ಕೇಳಿ ಬಂದಿವೆ.