ವಿಜಯಪುರ: ಕೋವಿಡ್ ವ್ಯಾಕ್ಸಿನ್ನಲ್ಲಿ ಭಾರತ ವಿಶ್ವ ದಾಖಲೆ ಮಾಡಿದೆ. ಕಡಿಮೆ ಅವಧಿಯಲ್ಲಿ ಜಗತ್ತಿನ ಯಾವ ರಾಷ್ಟ್ರ ಮಾಡದ ಸಾಧನೆ ಮಾಡಿದೆ. ಈ ಕೆಲಸವನ್ನು ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಕ್ಕಳಾಗಲ್ಲ ಎಂದು ಅಪಪ್ರಚಾರ ಮಾಡಿದವರಿಗೂ ಮೋದಿ ಉತ್ತರ ಕೊಟ್ಟಿದ್ದಾರೆ. ಕೊರೊನಾ ನಂತರ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂಕಷ್ಟದ ಬಿಸಿ ಭಾರತಕ್ಕೂ ತಟ್ಟಿದೆ. ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್ಗೆ 55 ಡಾಲರ್ ಇದ್ದದ್ದು, ಈಗ 110 ರೂ. ಆಗಿದೆ. ಬೆಲೆ ಏರಿಕೆಗೆ ಮೋದಿ ಅವರು ಹೊಣೆಯಲ್ಲ ಎಂದರು.
ಮೋದಿ ಸಾಧನೆಯೇ ಉತ್ತರ
ಇಂದು ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭವಾಗಿವೆ. ಬೆಲೆ ಏರಿಕೆ ಕೇವಲ ಒಂದು ತಾತ್ಕಾಲಿಕ. ಈ ಸಂಕಷ್ಟದ ನಡುವೆ 20 ತಿಂಗಳುಗಳ ಕಾಲ ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಯೋಜನೆಯಡಿ ರೇಷನ್ ಕೊಡುವ ಕೆಲಸ ಮಾಡಿದ್ದಾರೆ. 27 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ ಪ್ಯಾಕೇಜ್ ಘೋಷಣೆ ಮಾಡಿದರು. ಮೋದಿ ಏನು ಮಾಡಿದ್ದಾರೆ? ಎನ್ನುವವರಿಗೆ ಉತ್ತರ ಅವರು ಮಾಡಿದ ಸಾಧನೆಯೇ ತೋರಿಸುತ್ತದೆ ಎಂದು ತಿಳಿಸಿದರು.
1986ರಲ್ಲಿ ದಿವಂಗತ ರಾಜೀವ್ ಗಾಂಧಿ ಅವರು 100 ರೂಪಾಯಿ ಕಳುಹಿಸಿದರೆ ಕಟ್ಟ ಕಡೆಯ ಮನುಷ್ಯನಿಗೆ 10 ರೂಪಾಯಿ ತಲುಪುತಿತ್ತು. ಈಗ ಮದ್ಯವರ್ತಿಗಳ ಹಾವಳಿ ಇಲ್ಲ. ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡುಗು ಎಂದು ಲೇವಡಿ ಮಾಡಿದರು.
ಮೂರ್ಖರು ಇಲ್ಲವೇ ಗುಲಾಮರು ಕಾಂಗ್ರೆಸ್ನಲ್ಲಿ ಇರುತ್ತಾರೆ. ಪ್ರಜಾಪ್ರಭುತ್ವಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧ ಇಲ್ಲ. ಸಿದ್ದರಾಮಯ್ಯ ಅವರು ಜೆಡಿಎಸ್ನ ವಂಶಪಾರಂಪರ್ಯ ಬಗ್ಗೆ ಮಾತನಾಡುತ್ತಾರೆ. ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಲಿಲ್ಲ. ಅವರಿಗೆ ಬುದ್ದಿ ಇದೆ ಎಂದು ಕೊಂಡಿದ್ದೇನೆ. ಮುಂದಿನದ್ದು ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದು ಎಂದರು.
ಸಿದ್ದರಾಮಯ್ಯ ಮಾತು ಕೇವಲ ಜನರಿಗೆ ಮನರಂಜನೆ
ಸಿದ್ದರಾಮಯ್ಯ ಅವರ ಮಾತು ಕೇವಲ ಜನರಿಗೆ ಮನೋರಂಜನೆ ಉಂಟು ಮಾಡುತ್ತದೆ. ಅವರಿಗೆ ಮೋಸ ಮಾಡೋದು ಹೇಗೆ? ಚೆನ್ನಾಗಿ ಗೊತ್ತು. ಜನರಿಗೆ ಮೂರು ನಾಮ ಹಾಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಮನೆ ಹಾಳು ಮಾಡಲು ಅವರ ಸಿದ್ಧ ಸೂತ್ರವೇ ಸಾಕು ಎಂದು ಆರೋಪಿಸಿದರು.
ದಳ-ಬಿಜೆಪಿ ಹೊಂದಾಣಿಕೆ ನಾವು ಮಾಡಿಲ್ಲ. ನಾವು ಯಾವತ್ತು ರಾಷ್ಟ್ರವಾದಿಗಳೇ. ಹಗಲು ವೇಷ ಹಾಕುತ್ತಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು. ಕಾಳ ಸಂತೆಯಲ್ಲಿ ಅವರಿಗೆ ಮಾರಾಟ ಮಾಡುವುದು ಗೊತ್ತು. ಅಕ್ರಮವಾಗಿ ಮಾಡುವುದು ಅವರ ಜಾಯಮಾನ. ಹೀಗಾಗಿ, ಮೋದಿ ಬಂದ ಮೇಲೆ ಇಂದು ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿದ್ದಾರೆ ಎಂದರು.