ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾಶಯ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆಯೂ ಮೃತಪಟ್ಟಿದ್ದ ವೃದ್ಧನ ಶವ ಸಂಸ್ಕಾರಕ್ಕೆ ತುಂಬಿ ಹರಿಯುತ್ತಿರುವ ಹಳ್ಳ ಅಡ್ಡಿಪಡಿಸಿದೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮೃತಪಟ್ಟಿದ್ದ ವೃದ್ಧರೊಬ್ಬರ ಶವ ಸಂಸ್ಕಾರಕ್ಕಾಗಿ ತುಂಬಿರುವ ಹಳ್ಳ ದಾಟಿಕೊಂಡೇ ಶವ ಪೆಟ್ಟಿಗೆ ಹೊತ್ತೊಯ್ದು ಗ್ರಾಮಸ್ಥರು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಬಳವಾಟ ಗ್ರಾಮದಲ್ಲಿ ಸೋಮವಾರ 81 ವರ್ಷದ ಕಾಶಿಂಸಾಬ ಮುರ್ತೂಜಸಾಬ ದೊಡಮನಿ ಎಂಬವರು ಮೃತಪಟ್ಟಿದ್ದರು. ಮುಸ್ಲಿಂ ಸಂಪ್ರದಾಯದಂತೆ ಅವರ ಅಂತ್ಯ ಸಂಸ್ಕಾರ ಮಾಡಬೇಕಾಗಿತ್ತು. ಆದರೆ ಮುಸ್ಲಿಂ ಸಮಾಜದ ಸ್ಮಶಾನ ದೂರವಿದೆ. ಇದರ ನಡುವೆ ಹಳ್ಳವಿದ್ದು, ಮಳೆ ಇದ್ದಾಗಲೂ ಇಲ್ಲದಿದ್ದಾಗಲೂ ಈ ಹಳ್ಳ ತುಂಬಿ ಹರಿಯುತ್ತಿರುತ್ತದೆ. ಹೀಗಾಗಿ ವರ್ಷದ 12 ತಿಂಗಳು ಗ್ರಾಮದಿಂದ ಸ್ಮಶಾನಕ್ಕೆ ಹೋಗಬೇಕಾದರೆ ಈ ಹಳ್ಳ ದಾಟಿಕೊಂಡೇ ಹೋಗಬೇಕು.
ಬಳವಾಟ ಗ್ರಾಮದಿಂದ ಸ್ಮಶಾನ ತಲುಪಲು 1 ಕಿ.ಮೀ. ದಾರಿ ಕ್ರಮಿಸಬೇಕು. ಈ ಹಳ್ಳ ದಾಟಲು ಕನಿಷ್ಠ 100 ಮೀಟರ್ ನೀರಿನಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ ಭೋವಿ ಸಮಾಜದ ಸ್ಮಶಾನ ಭೂಮಿ ಇರುವ ಕಾರಣ ಮುಸ್ಲಿಂ ಹಾಗೂ ವಡ್ಡರ ಸಮಾಜದ ಜನತೆ ಯಾರಾದರು ಮೃತಪಟ್ಟರೆ ಪ್ರತಿ ಬಾರಿ ಹಳ್ಳದ ನೀರು ದಾಟುವ ಅನಿರ್ವಾಯವಿದೆ.
ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುವುದು ಸ್ಥಳೀಯರ ಆರೋಪವಾಗಿದೆ.