ವಿಜಯಪುರ : ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಬಂಗಾರದ ಬೆಳೆ ಬೆಳೆಯಲು ಕಾರಣೀಭೂತರಾದ ಜನಪ್ರತಿನಿಧಿಗೆ ನೀರಾವರಿ ಸೌಲಭ್ಯ ಪಡೆದ ಗ್ರಾಮಸ್ಥರು ವಂತಿಗೆ ಸಂಗ್ರಹಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಸಂಗಾಪುರ ಎಚ್ ಗ್ರಾಮದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಡಾ. ಎಂ.ಬಿ.ಪಾಟೀಲ ಅವರ ಕಂಚಿನ ಪ್ರತಿಮೆಯನ್ನು ಗ್ರಾಮಸ್ಥರು ಸ್ಥಾಪಿಸಿದ್ದಾರೆ. ಈ ಪ್ರತಿಮೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ವೇಮನ ಸಂಸ್ಥಾನಮಠದ ವೇಮಾನಂದ ಶ್ರೀ, ಮುರುಘೇಂದ್ರ ಶ್ರೀ, ಸಿದ್ದಲಿಂಗ ಸ್ವಾಮೀಜಿ, ಕುಮಾರೇಶ್ವರ ಶ್ರೀ ಹಾಗೂ ಡಾ ಮಹಾದೇವ ಶಿವಾಚಾರ್ಯರು ಅನಾವರಣಗೊಳಿಸಿದರು.
ಬಬಲೇಶ್ವರ ಮತಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಸಚಿವ ಎಂ.ಬಿ.ಪಾಟೀಲ ತಮ್ಮ ಸ್ವಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಒದಗಿಸಿದ್ದು, ಇದರಿಂದಾಗಿ ಜಮೀನುಗಳಿಗೆ ನೀರು ಹರಿಸಿದ ಪರಿಣಾಮ ಬರಡು ಭೂಮಿ ನೀರಾವರಿ ಭೂಮಿಯಾಗಿ ಅಭಿವೃದ್ಧಿ ಹೊಂದಿದೆ. ಈ ಹಿನ್ನೆಲೆ ಗ್ರಾಮಸ್ಥರೆಲ್ಲರೂ ಸೇರಿ ಎಂ. ಬಿ ಪಾಟೀಲರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ.
ಕಂಚಿನ ಪುತ್ಥಳಿ ವಿಶೇಷತೆ : ಇದು ಸುಮಾರು 6.5 ಅಡಿ ಎತ್ತರ ಇರುವ ಕಂಚಿನ ಪ್ರತಿಮೆಯಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸಿದ ಎಂ.ಬಿ.ಪಾಟೀಲರಿಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಏನಾದರೂ ಕೊಡುವ ಬಗ್ಗೆ ಗ್ರಾಮಸ್ಥರು ಚಿಂತಿಸಿದ್ದರು. ಮೊದಲು ಬೆಳ್ಳಿಗದೆ ಅಥವಾ ಬಂಗಾರದ ಕಿರೀಟವನ್ನು ತೋಡಿಸೋಣ ಎಂದು ನಿರ್ಧರಿಸಿದ್ದರಂತೆ. ಅನಂತರ ಶಾಶ್ವತವಾಗಿರುವ ಹಾಗೂ ಸದಾ ನೆನಪಿನಲ್ಲಿ ಉಳಿಯುವ ಕಾಣಿಕೆ ನೀಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದಾಗ ಈ ಕಂಚಿನ ಪ್ರತಿಮೆ ನಿರ್ಮಿಸುವ ಕುರಿತು ಚರ್ಚೆಯಾಗಿದೆ. ಬಳಿಕ ಊರಿನ ಮುಖಂಡರೆಲ್ಲ ಸೇರಿ ದೇಶದ ಬೇರೆ ಬೇರೆ ರಾಜ್ಯಗಳಿಗೆ ತೆರಳಿ, ಬದುಕಿದ್ದವರ ಪ್ರತಿಮೆ ನಿರ್ಮಿಸಿದ್ದಾರಾ ಎಂಬ ಬಗ್ಗೆ ತಿಳಿದುಕೊಂಡು ಕೊನೆಗೆ ಕಂಚಿನ ಪ್ರತಿಮೆ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಇದನ್ನು ಶಾಸಕರ ಗಮನಕ್ಕೆ ತಂದರೆ ನಿರಾಕರಿಸುತ್ತಾರೆ ಎಂಬ ಕಾರಣಕ್ಕೆ ಪ್ರತಿಮೆ ತಯಾರಾಗುವವರೆಗೂ ಈ ವಿಷಯವನ್ನು ಗ್ರಾಮಸ್ಥರು ಬಹಿರಂಗಪಡಿಸಿರಲಿಲ್ಲ.
ಪಕ್ಷಾತೀತವಾಗಿ ಈ ಊರಿನ ಜನರೇ ಹಣ ಸಂಗ್ರಹಿಸಿ 7 ಲಕ್ಷ ನಗದು ನೀಡಿ ರಾಜಸ್ಥಾನದ ಜೈಪುರ್ ನಲ್ಲಿ 6.5 ಅಡಿ ಎತ್ತರದ ಹಾಗೂ 300 ಕೆಜಿ ತೂಕದ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನು ಸ್ಥಾಪಿಸಲು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಪೀಠವನ್ನು ನಿರ್ಮಾಣ ಮಾಡಿದ್ದಾರೆ. ಎಂ.ಬಿ ಪಾಟೀಲ್ ಅವರು ಮಲಘಾಣ ಪಶ್ಚಿಮ ಕೆನಾಲ್ ಮೂಲಕ, ಸಂಗಾಪುರ ಎಚ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಈ ಭಾಗದ ರೈತರಿಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಪ್ರತಿಮೆ ಸ್ಥಾಪಿಸಲಾಗಿತ್ತು : ಬದುಕಿರುವಾಗಲೇ ಕಂಚಿನ ಪ್ರತಿಮೆ ನಿರ್ಮಿಸಿಕೊಂಡವರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಬ್ಬರಾಗಿದ್ದಾರೆ. ಸಿಂದಗಿ ತಾಲೂಕಿನಲ್ಲಿ ನೀರಾವರಿ ಸೌಲಭ್ಯ ದೊರಕಿಸಿಕೊಟ್ಟಿದ್ದ ಗೌಡರ ಕಂಚಿನ ಪ್ರತಿಮೆಯನ್ನು ದಿವಂಗತ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಗೋಲಗೇರಿ ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದರು.
ಇದನ್ನೂ ಓದಿ : ಮಾ.25ರಂದು ದಾವಣಗೆರೆಯಲ್ಲಿ ಬಿಜೆಪಿ ಮಹಾ ಸಂಗಮ: ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ