ವಿಜಯಪುರ: ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯಗಳಿಂದ ಅವೈಜ್ಞಾನಿಕವಾಗಿ ನೀರು ಬಿಟ್ಟು ದೊಡ್ಡ ಮಟ್ಟದ ಪ್ರವಾಹಕ್ಕೆ ಕಾರಣವಾಗಿರುವ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಕುರಿತು ಸರ್ಕಾರದಿಂದ ವಿಚಾರಣೆ ಆರಂಭವಾದ ಮೇಲೆ ಎಲ್ಲಿ ಲೋಪವಾಗಿದೆ. ಯಾವ ಅಧಿಕಾರಿ ತಪ್ಪಿತಸ್ಥ ಎನ್ನುವದು ಗೊತ್ತಾಗಲಿದೆ ಎಂದು ಆಲಮಟ್ಟಿಯಲ್ಲಿ ಸುದ್ದಿಗಾರಿಗೆ ತಿಳಿಸಿದರು.
ಕೃಷ್ಣಾ ನದಿ ನಿರ್ವಹಣಾ ಮಾದರಿಯಲ್ಲಿ ಭೀಮಾ ನದಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನವೆಂಬರ್ ಎರಡನೇ ವಾರದಲ್ಲಿ ಸಮಿತಿ ರಚನೆಯಾಗಲಿದ್ದು, ಇದರಲ್ಲಿ ಯಾವ ತಜ್ಞರು, ಅಧಿಕಾರಿಗಳನ್ನು ನೇಮಿಸಬೇಕು ಎನ್ನುವದು ಅಂತಿಮವಾಗಲಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡುವಾಗ ಕೈಗೊಳ್ಳಬೇಕಾದ ಕ್ರಮ ಹಾಗೂ ರಾಜ್ಯ ಸರ್ಕಾರ ಸಮಯಕ್ಕೆ ತಕ್ಕಂತೆ ನೀರು ನಿರ್ವಹಣೆ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈಗ ಮಹಾರಾಷ್ಟ್ರದಿಂದ ಬೇಕಾಬಿಟ್ಟಿ ನೀರು ಬಿಟ್ಟ ಕಾರಣಕ್ಕೆ ಭೀಮಾ ನದಿ ತೀರದಲ್ಲಿ ಪ್ರವಾಹ ಉಂಟಾಗಿದೆ. ಈ ತಪ್ಪು ಮರುಕಳಿಸಬಾರದು ಎನ್ನುವ ಉದ್ದೇಶದಿಂದ ನೀರು ನಿರ್ವಹಣಾ ಸಮಿತಿ ರಚಿಸಲಾಗುತ್ತಿದೆ. ಸದ್ಯ ಆದ ಪ್ರಮಾದ ಕುರಿತು ತಪ್ಪು ಎಸೆಗಿರುವ ಅಧಿಕಾರಿಗಳ ವಿರುದ್ಧ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.