ವಿಜಯಪುರ : ಜಿಲ್ಲೆಯ ಬಸವನ ಬಾಗೇವಾಡಿ ಭಾಗದ ಕಾಂಗ್ರೆಸ್ ಮುಖಂಡನೊಬ್ಬನಿಗೆ ಯುವತಿಯೊಬ್ಬಳು ಸಿಕ್ಕಾಪಟ್ಟೆ ಹಲ್ಲೆ ಮಾಡಿರುವ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ತಾಂಡಾ ನಿವಾಸಿ ಹುನ್ನು ರಾಠೋಡ್, ಯುವತಿಯೊಬ್ಬಳಿಂದ ಒದೆ ತಿಂದಿರುವ ಮುಖಂಡ. ಹುನ್ನು ರಾಠೋಡ್‌ನ ಮಗಳ ಗೆಳತಿ ಲಕ್ಷ್ಮಿಬಾಯಿ ಈತನಿಗೆ ಒದೆ ಕೊಟ್ಟ ಯುವತಿ. ಕಳೆದ ವರ್ಷ ಹುನ್ನು ರಾಠೋಡ್, ಲಕ್ಷ್ಮಿಬಾಯಿಗೆ 8 ಸಾವಿರ ರೂಪಾಯಿ ಸಾಲ ಕೊಟ್ಟಿದ್ದನಂತೆ. ಆ ಹಣ ವಾಪಸ್ ಕೊಡು, ಇಲ್ಲವಾದ್ರೆ ನನ್ನ ಬಳಿ ಬಾ.. ನನ್ನೊಂದಿಗೆ ಬೇರೆ ರೀತಿ ಸಹಕರಿಸು ಎಂದು ಆಕೆಯನ್ನು ಪೀಡಿಸುತ್ತಿದ್ದನಂತೆ. ಈತನ ಕಿರುಕುಳಕ್ಕೆ ಬೇಸತ್ತ ಆ ಯುವತಿ ಹಣ ಕೊಡ್ತೇನೆ ಬಾ ಎಂದು ಈತನನ್ನು ಕರೆಸಿ ತನ್ನ ಸ್ನೇಹಿತ ಕಾಶೀನಾಥ್ ಹಾಗೂ ಸಮೀರ್ ಶೇಖ್ ಎಂಬುವರ ಜತೆಗೆ ಸೇರಿ ಹಲ್ಲೆ ಮಾಡಿ ಕಳುಹಿಸಿದ್ದಾಳೆ.
ಕಳೆದ ತಿಂಗಳು ವಿಜಯಪುರ ಹೊರವಲಯದಲ್ಲಿನ ಜಮೀನೊಂದರಲ್ಲಿ ಈ ಘಟನೆ ನಡೆದಿದೆ. ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತೀಯಾ? ಎಂದು ಯುವತಿ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋ ಲೀಕ್ ಆಗುತ್ತಿದ್ದಂತೆ ಎಚ್ಚೆತ್ತ ಹುನ್ನು ರಾಠೋಡ್, ಇದೇ ಜುಲೈ 7ರಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ವಿಡಿಯೋದಲ್ಲಿರುವ ಮೂವರ ವಿರುದ್ಧ ಅಪಹರಣ ಹಾಗೂ ಹಲ್ಲೆಯ ಕುರಿತು ದೂರು ದಾಖಲಿಸಿದ್ದಾರೆ.
ಲಕ್ಷ್ಮಿಬಾಯಿಗೆ ಸಾಲ ಕೊಟ್ಟಿದ್ದ ಎಂಟು ಸಾವಿರ ರೂಪಾಯಿ ವಾಪಸ್ ಕೇಳಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ದೂರಿದ್ದಾರೆ ಹುನ್ನು ರಾಥೋಡ್. ಯುವತಿ ಒದೆ ನೀಡಿದ್ದ ವಿಡಿಯೋವನ್ನೇ ಸಾಕ್ಷಿಯಾಗಿಸಿಕೊಂಡ ಪೊಲೀಸರು ಲಕ್ಷ್ಮಿಬಾಯಿ, ಕಾಶಿನಾಥ ಹಾಗೂ ಸಮೀರ್ ಎಂಬ ಮೂವರನ್ನು ಬಂಧಿಸಿದ್ದಾರೆ.
ಸಾಲ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಅಪಹರಣ ಮಾಡಿ ಹಲ್ಲೆ ಮಾಡಿದ್ರಾ ಅಥವಾ ಯುವತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಕ್ಕೆ ಒದೆ ಬಿದ್ದಿದಿಯಾ? ಎಂಬುದು ಪೊಲೀಸರ ತನಿಖೆ ಬಳಿಕ ತಿಳಿದು ಬರಲಿದೆ.