ವಿಜಯಪುರ: ಸಿಂದಗಿ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ಪಕ್ಷಾಂತರ ಪರ್ವ ಜೋರಾಗಿ ಆರಂಭವಾಗಿದೆ. ಜೆಡಿಎಸ್ ಶಾಸಕ ದಿ. ಮನಗೂಳಿ ಅವರ ಪುತ್ರ ಕಾಂಗ್ರೆಸ್ ಸೇರ್ಪಡೆಯಾಗಿ ಉಪಚುನಾವಣೆಗೆ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಅವರ ಸಹೋದರ ಪುರಸಭೆ ಅಧ್ಯಕ್ಷ ಸಹ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಲ್ಲುವ ಮೂಲಕ ಸಿಂದಗಿಯಲ್ಲಿ ಜೆಡಿಎಸ್ ಪಕ್ಷದ ವರ್ಚಸ್ಸು ಮತ್ತಷ್ಟು ಕಳೆಗುಂದುತ್ತಿದೆ.
ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನ ನಂತರ ಸಿಂದಗಿ ಮತಕ್ಷೇತ್ರಕ್ಕೆ ಇನ್ನೇನು ಉಪಚುನಾವಣೆ ದಿನಾಂಕ ಘೋಷಣೆ ಆಗುವ ಮುನ್ನವೇ ಮನಗೂಳಿ ಕುಟುಂಬವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸಿಂದಗಿ ಕ್ಷೇತ್ರವನ್ನು ಗೆಲ್ಲುವ ತಯಾರಿ ನಡೆಸುತ್ತಿದೆ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿಕೊಂಡು ಪ್ರಚಾರ ಸಹ ಆರಂಭಿಸಿದ್ದಾರೆ.
ಅವರ ತಂದೆ ಎಂ.ಸಿ.ಮನಗೂಳಿ ಕಳೆದ 40 ವರ್ಷಗಳಿಂದ ಜೆಡಿಎಸ್ನಲ್ಲಿ ರಾಜಕೀಯ ಮಾಡಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪರಮ ಆಪ್ತರಾಗಿ ಗುರುತಿಸಿಕೊಂಡಿದ್ದರು. ಕೊನೆಯವರೆಗೂ ಜೆಡಿಎಸ್ಗೆ ನಿಷ್ಠೆ ತೋರಿದ್ದರು. ಆದರೆ, ಬದಲಾದ ರಾಜಕಾರಣದಲ್ಲಿ ಅವರ ಪುತ್ರರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಸಿಂದಗಿ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ತಾವು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರೂ ಸಹ ಯಾವುದೇ ಸ್ಪಂದನೆ ದೊರೆಯದ್ದಿದ್ದಾಗ ತಮ್ಮ ತಂದೆಯವರ ರಾಜಕೀಯ ಜೀವನ ಮುಂದುವರೆಸಲು ಕಾಂಗ್ರೆಸ್ ಕೈ ಹಿಡಿದಿರುವುದಾಗಿ ಮನಗೂಳಿ ಪುತ್ರ ಅಶೋಕ ತಮ್ಮ ಕಾಂಗ್ರೆಸ್ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಶೋಕ ಮನಗೂಳಿ ಅವರ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲಿಯೇ ಅವರ ಮತ್ತೊಬ್ಬ ಸಹೋದರ ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ಸಹ ತನ್ನ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಮೊದಲು ಸಿಂದಗಿ ಉಪಚುನಾವಣೆಯಲ್ಲಿ ಸಹೋದರ ಅಶೋಕ ವಿರುದ್ಧವಾಗಿ ಜೆಡಿಎಸ್ನಿಂದ ಕಣಕ್ಜೆ ಇಳಿಯುವ ಮಾತು ಕೇಳಿ ಬಂದಿದ್ದವು. ಆದರೆ, ಈ ಮಾತನ್ನು ತಳ್ಳಿ ಹಾಕಿರುವ ಅವರು ತಾವು ರಾಜಕೀಯಕ್ಕೆ ಅನಿರೀಕ್ಷಿತವಾಗಿ ಬಂದಿರುವೆ ಹೊರತು ರಾಜಕೀಯ ತಮ್ಮ ಕ್ಷೇತ್ರವಲ್ಲ ಎಂದು ಹೇಳಿಕೊಂಡಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ವರ್ಚಸ್ಸು ಇದ್ದಿದ್ದೆ ತಮ್ಮ ತಂದೆಯ ಪ್ರಭಾವದಿಂದ. ಹೀಗಿರುವಾಗ ಜೆಡಿಎಸ್ನಲ್ಲಿದ್ದು ಏಕಾಂಗಿ ಹೋರಾಟದಿಂದ ಕ್ಷೇತ್ರದ ಅಭಿವೃದ್ದಿ ಅಸಾಧ್ಯ ಹಾಗೂ ತಮ್ಮ ಸಹೋದರ ಬೆಂಬಲಕ್ಕೆ ನಿಲ್ಲಲು ಜೆಡಿಎಸ್ ತೊರೆಯಲು ಶಾಂತವೀರ ಮನಗೂಳಿ ಸಹ ನಿರ್ಧರಿಸಿದ್ದಾರೆ.
ರಾಜ್ಯದ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಚುನಾವಣೆಗೆ ಉಪಚುನಾವಣೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಮನಗೂಳಿ ಕುಟುಂಬದವರು ಜೆಡಿಎಸ್ ಪಕ್ಷ ತೊರೆಯುತ್ತಿರುವ ಕಾರಣ ಕ್ಷೇತ್ರಕ್ಕೆ ಜೆಡಿಎಸ್ನಿಂದ ಹೊಸಮುಖ ಹುಡುಕಲಾಗುತ್ತಿದೆ. ಬಿಜೆಪಿಯಲ್ಲಿ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.