ಮುದ್ದೇಬಿಹಾಳ (ವಿಜಯಪುರ): ಕೋವಿಡ್ ಲಕ್ಷಣಗಳಿರುವವರಿಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಹೇಳಲು ಹೋದಾಗ ನಮ್ಮನ್ನೇ ಹೊಡೆಯೋದಕ್ಕೂ ಬಂದಿದ್ದಾರೆ. ಕೆಲವರು ಗ್ರಾಮ ಪಂಚಾಯತಿ ಮೆಂಬರ್ ಮುಂದೆಯೇ ಬೈದಿದ್ದಾರೆ. ಇಂತಹ ಕಷ್ಟವನ್ನು ನೆನೆದು ಯಾರಿಗೂ ಹೇಳಿಕೊಳ್ಳಲಾಗದೇ ಒಂದೆಡೆ ಕೂತು ಅತ್ತಿದ್ದೇನೆ ಎಂದು ತಾಲೂಕಿನ ಅರಸನಾಳ ಆಶಾ ಕಾರ್ಯಕರ್ತೆ ಶಕುಂತಲಾ ಬಿರಾದಾರ ಹೇಳಿದರು.
ಮೊದಲು ಲಸಿಕೆ ಪಡೆದುಕೊಳ್ಳಿ ಎಂದರೆ, ಬೇಡ ಹೋಗು ನಮಗೆ ಏನೂ ಆಗಿಲ್ಲ ಎಂದವರು ಇದೀಗ ಲಸಿಕೆ ಯಾವಾಗ ಬರುತ್ತದೆ ಎನ್ನುತ್ತಿದ್ದಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಇಜಾರದಾರ ಮಾತನಾಡಿ, ಹಳ್ಳಿಯಲ್ಲಿ ಕೆಲವರು ನಾವು ಹೇಳಿದ ಮಾತು ಕೇಳಿ ಗುಂಪುಗೂಡುತ್ತಿರಲಿಲ್ಲ. ಮತ್ತೆ ಕೆಲವರು ನಾವು ಹೇಳಿದ್ದನ್ನು ಕೇಳುತ್ತಿರಲಿಲ್ಲ. ಆದರೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿದ್ದೇವೆ ಎಂದು ಹೇಳಿದರು.