ವಿಜಯಪುರ: ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲುವೆಗಳಿಗೆ ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿಗೆ ಎರಡು ಅವಧಿಗೆ ನೀರು ಹರಿಸಬೇಕೆಂದು ಮುದ್ದೇಬಿಹಾಳದ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ಆಲಮಟ್ಟಿಯ ಕೆಬಿಜೆಎನ್ಎಲ್ ಕಚೇರಿಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ಪ್ರಗತಿಯಲ್ಲಿರುವ ಎಲ್ಲ ಕಾಲುವೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ಪ್ರಗತಿಯಲ್ಲಿರುವ ಕ್ಲೋಜರ್ ಹಾಗೂ ಸ್ಪೆಷಲ್ ದುರಸ್ತಿ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಯಾಗಿವೆ. ಅದಕ್ಕೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಲಾಶಯ ವ್ಯಾಪ್ತಿಯ ಕಾಲುವೆಗಳಿಂದ ಇನ್ನೂ ಸಾವಿರಾರು ಎಕರೆ ಜಮೀನುಗಳಿಗೆ ನೀರು ಕೊಡದೇ ಅವರ ಕರ ವಿಧಿಸುತ್ತಿರುವುದು ಅವೈಜ್ಞಾನಿಕವಾಗಿದೆ. ನೀರಾವರಿ ವಂಚಿತ ಜಮೀನಿಗೆ ನೀರು ಒದಗಿಸಲು ಕಾಲುವೆಗಳನ್ನು ನಿರ್ಮಿಸಬೇಕು.
ಕಳೆದ ವರ್ಷವೂ ಕ್ಲೋಜರ್ ಕಾಮಗಾರಿಗಳು ಕಳಪೆಯಾಗಿದ್ದರ ಪರಿಣಾಮ ಕಾಲುವೆಗಳಲ್ಲಿ ನೀರು ಹರಿಯದೇ ರೈತರ ಜಮೀನಿನಲ್ಲಿ ನೀರು ಹರಿದು ಅಪಾರ ಹಾನಿಯಾಗಿತ್ತು. ಆದ್ದರಿಂದ ಈಗ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಿಂದ ನಿರ್ವಹಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ರು.
ಕರ್ನಾಟಕ ರಾಜ್ಯ ರೈತ ಸಂಘ ಮುದ್ದೇಬಿಹಾಳ ತಾಲೂಕು ಘಟಕದಿಂದ ಕೃಷ್ಣಾಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆಲಮಟ್ಟಿ ಮುಖ್ಯ ಅಭಿಯಂತರರ ಮೂಲಕ ಮನವಿ ಸಲ್ಲಿಸಲಾಯಿತು.