ವಿಜಯಪುರ: ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗುತ್ತಿರುವ ರಾಷ್ಟ್ರೀಯ ಏಕರೂಪ ನೇಮಕಾತಿ ವಿರೋಧಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕರೂಪ ನೇಮಕಾತಿ ಮಾಡಲು ಪರೀಕ್ಷೆ ಆರಂಭಿಸಲು ನೂತನ ನೀತಿ ರಚನೆ ಮಾಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಏಕರೂಪ ನೇಮಕಾತಿಯಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತದೆ. ಅಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳುವುದಿಲ್ಲ.
ನೇಮಕವಾಗಿ ಇಲ್ಲಿಗೆ ಬರುವ ಹೊರ ರಾಜ್ಯದ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬಗ್ಗೆ ಅರಿವು ಇರುವುದಿಲ್ಲ. ಇದರಿಂದ ರಾಜ್ಯದ ಜನತೆ ಮೇಲೆ ಮತ್ತೆ ಹೊರೆಯಾಗಲಿದೆ. ರಾಜ್ಯದಲ್ಲಿ ಅನೇಕ ನಿರುದ್ಯೋಗಿಗಳಿದ್ದಾರೆ. ಹೀಗಿರುವಾಗ ಏಕರೂಪ ನೇಮಕಾತಿ ಜಾರಿ ಮಾಡುವುದು ಸಮಂಜಸವಲ್ಲ. ತಕ್ಷಣವೇ ಕೇಂದ್ರ ಸರ್ಕಾರ ಏಕರೂಪ ನೇಮಕಾತಿ ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.